ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕಾಶ್ಮೀರದ ಪಹಲ್ಗಾಮ್ ಸಮೀಪದಲ್ಲಿರುವ ಪ್ರಖ್ಯಾತ ಪ್ರವಾಸಿತಾಣವಾದ ಬೈಸರನ್‌ಕಣಿವೆಯಲ್ಲಿ ಮಂಗಳವಾರ ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಭರತ್ ಭೂಷಣ್ ಸೇರಿದಂತೆ 28 ಜನ ಪ್ರವಾಸಿಗರನ್ನು ಬಲಿ ಪಡೆದಿರುವ ಭಯೋತ್ಪಾದಕರ ಪೈಶಾಚಿಕ ಕ್ರೌರ್ಯವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಜಿಲ್ಲಾ ಸಮಿತಿ ಖಂಡಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಡಿವೈಎಫ್‌ಐ ಜಿಲ್ಲಾ ಮುಖಂಡ ದಾವಲಸಾಬ ತಾಳಿಕೋಟಿ, ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯು ಆಘಾತಕಾರಿಯಾಗಿದೆ. ಅಮಾಯಕರ ಮೇಲೆ ದಾಳಿಗೈದು ಹತ್ಯೆ ಮಾಡಿದ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಕೇಂದ್ರ ಸರಕಾರ ಖಾತ್ರಿಪಡಿಸಬೇಕು.
ಕೇಂದ್ರ ಸರಕಾರ ಜಮ್ಮು-ಕಾಶ್ಮೀರದಲ್ಲಿ ಸಹಜ ಸ್ಥಿತಿಯಿದೆ ಎಂದು ಹೇಳುತ್ತಿದೆಯಾದರೂ, ವಾಸ್ತವ ಪರಿಸ್ಥಿತಿಯಲ್ಲಿ ಅಲ್ಲಿನ ನಿವಾಸಿಗಳು, ವಲಸೆ ಕಾರ್ಮಿಕರು ಹಾಗೂ ಪ್ರವಾಸಿಗರ ಮೇಲೆ ದಾಳಿಗಳು ನಡೆಯುತ್ತಿವೆ. ಆದ್ದರಿಂದ ಕೇಂದ್ರ ಸರಕಾರ ಜಮ್ಮು ಕಾಶ್ಮೀರದಲ್ಲಿ ಸಹಜಸ್ಥಿತಿ ನೆಲೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ದೇಶದ ಐಕ್ಯತೆ, ಸೌಹಾರ್ದತೆಗೆ ಕಂಟಕವಾಗಿರುವ ಈ ಭಯೋತ್ಪಾದನೆಯ ವಿರುದ್ಧ ದೇಶದ ಜನತೆ ಒಟ್ಟಾಗಿ ನಿಲ್ಲುವ ಅಗತ್ಯವಿದೆ. ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ಕೇಂದ್ರ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.