ನಿಮ್ಮ ಮನೆ ಬಾಗಿಲಿಗೆ `ಇ-ಖಾತಾ’ ಸೌಲಭ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಸರ್ಕಾರದಿಂದ ಪಿತ್ರಾರ್ಜಿತ ಆಸ್ತಿ ಹಕ್ಕನ್ನು ರೈತರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲು ಕಂದಾಯ ಇಲಾಖೆಯಿಂದ ಇ-ಪೌತಿ ಆಂದೋಲನ ನಡೆಸಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ 70 ಸಾವಿರ ಪೌತಿ (ಮರಣ) ಖಾತೆ ಹೊಂದಿದ ಪ್ರಕರಣಗಳಿದ್ದು, ಈ ಎಲ್ಲಾ ರೈತರು ಇ-ಖಾತಾ ಹೊಂದಲು ತಮ್ಮ ಮನೆ ಬಾಗಿಲಿಗೆ ಬರುತ್ತಿದ್ದು, ಇದರ ಸಂಪೂರ್ಣ ಸೌಲಭ್ಯವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಗದಗ ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಹೇಳಿದರು.

Advertisement

ಡಂಬಳ ಹೋಬಳಿಯ ವೆಂಕಟಾಪೂರ ಗ್ರಾಮದ ಅನ್ನದಾನೀಶ್ವರ ಮಠದ ಆವರಣದಲ್ಲಿ ಕಂದಾಯ ಇಲಾಖೆ ಮೂಲಕ ಇ-ಪೌತಿ ವಾರಸಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾಗದಿದ್ದರೆ ಅಂತಹ ಜಮೀನು ಸ್ವಾಧೀನ ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು, ಬೆಳೆಸಾಲ, ಕೃಷಿ, ತೋಟಗಾರಿಕೆ ಸೌಲಭ್ಯಗಳು ದೊರೆಯುವುದಿಲ್ಲ. ಬೆಳೆಹಾನಿ ಆದ ವೇಳೆ ಪರಿಹಾರ ಪಡೆಯಲು ದುಸ್ತರವಾಗುತ್ತದೆ. ಹೀಗಾಗಿ ಆಸ್ತಿ ಹಕ್ಕು ವರ್ಗಾವಣೆಗೆ ಇ-ಪೌತಿ ಆಂದೋಲನ ಆರಂಭಿಸಲಾಗಿದೆ ಎಂದರು.

ಕೆಲ ಪ್ರಕರಣದಲ್ಲಿ ಉತ್ತರಾಧಿಕಾರಿಗಳ ತಕರಾರು ಇದ್ದು, ಪೌತಿ ಖಾತೆ ಮಾಡಲು ಒಪ್ಪಿರುವುದಿಲ್ಲ ಎಂದು ಪಹಣಿ ಕಾಲಂ 11ರಲ್ಲಿ ನಮೂದಿಸಲಾಗುತ್ತದೆ. ಹೀಗಾಗಿ ಇ-ಪೌತಿ ಖಾತಾಗೆ ಬೇಕಾದ ವಂಶವೃಕ್ಷ ಮರಣ ಪ್ರಮಾಣದಂತಹ ಇತರ ದಾಖಲೆ ಸಿದ್ಧಪಡಿಸಿಕೊಂಡು ಆಂದೋಲನ ಯಶಸ್ವಿಗೆ ಜಿಲ್ಲೆಯ ರೈತರು ಸಹಕರಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗೆ ಸಂಬಂಧಿಸಿದಂತೆ ತಹಸೀಲ್ದಾರ, ಉಪತಹಸೀಲ್ದಾರ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಲು ಮುಂದಾಗಬೇಕು ಎಂದು ಹೇಳಿದರು.

ಮುಂಡರಗಿ ತಹಸೀಲ್ದಾರ ಯರಿಸ್ವಾಮಿ ಪಿ.ಎಸ್. ಮಾತನಾಡಿ, ಮುಂಡರಗಿ ತಾಲೂಕಿನಲ್ಲಿ ಪೋತಿ ಇರುವ ಖಾತೆಗಳು 8000 ಸಾವಿರ, ವೆಂಕಟಾಪೂರ ಗ್ರಾಮದಲ್ಲಿ 180 ಪೋತಿ ಖಾತಾ ಇದ್ದು, ಈಗಾಗಲೇ 20 ಅರ್ಜಿಗಳು ಬಂದಿವೆ. ಅವರಿಗೆ ಶೀಘ್ರದಲ್ಲಿ ಇ-ಖಾತಾ ಮಾಡಿಕೊಡಲಾಗುವುದು. ಇದರ ಸದುಪಯೋಗವನ್ನು ಇನ್ನುಳಿದ ರೈತರು ಪಡೆಯಬೇಕು. ಈಗಾಗಲೇ ಮರಣ ಹೊಂದಿದವರ ಹೆಸರಿನಲ್ಲಿರುವ ವಾರಸುದಾರರಿಗೆ ತಿಳುವಳಿಕೆಯ ಪತ್ರವನ್ನು ನೀಡಿದ್ದು, ಇ-ಖಾತಾ ಹೊಂದಲು ರೈತರು ಮುಂದಾಗಬೇಕು ಎಂದು ಹೇಳಿದರು.

ಗದಗ ಚುನಾವಣಾ ತಹಸೀಲ್ದಾರ ಸಂತೋಷ ಹಿರೇಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪತಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮ ಆಡಳಿತಾಧಿಕಾರಿಗಳಾದ ಪರಸು ಗಾಡಿ, ಲಕ್ಷ್ಮಣ ಗುಡಸಲಮನಿ, ವಿನೋದ ಹೊಸಮಠ, ಗ್ರಾಮದ ರೈತರಾದ ಚನ್ನಬಸಪ್ಪ ಹಳ್ಳಿ, ಕಲ್ಲೇಶ, ಸಂಗಪ್ಪ ಸಣ್ಣದ್ಯಾವಣ್ಣವರ, ಮಂಜುನಾಥ ಕಿನ್ನಾಳ, ಯಲ್ಲಪ ಸಣ್ಣದ್ಯಾವಣ್ಣವರ, ಮಲ್ಲಪ್ಪ ಹೊಸಮನಿ, ಬಸುರಾಜ ಕೊಪ್ಪಳ, ನಿಂಗಪ್ಪ ಹೊಸಮನಿ, ಶಂಕ್ರಪ್ಪ ಹೊಸಮನಿ, ಶುಭಾಸ ಚವಡಿ, ಗ್ರಾಮದ ಹಿರಿಯರು, ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು ಇದ್ದರು.

ಇ-ಪೌತಿ ಮಾಡಿಸಿಕೊಳ್ಳಲು ಸಂಬAಧಿಸಿದವರು ಮೃತರ ಮರಣ ಪ್ರಮಾಣಪತ್ರ, ಗಣಕೀಕೃತ ವಂಶವೃಕ್ಷ ಪ್ರಮಾಣಪತ್ರ, ಆಧಾರ್ ಕಾರ್ಡ್ ಗಳನ್ನು ಗ್ರಾಮಾಡಳಿತಾಧಿಕಾರಿಗಳಿಗೆ ಸಲ್ಲಿಸಬೇಕು. ಅವರು ಕಾನೂನು ಬದ್ಧ ವಾರಸುದಾರರ ಆಧಾರ್ ಇ-ಕೆವೈಸಿ ಮಾಡುತ್ತಾರೆ. ಉತ್ತರಾಧಿಕಾರಿ ಇದ್ದರೆ ಫೋಟೋ ತೆಗೆದು ಯಾಪ್ನಲ್ಲಿ ಅಪ್ಲೋಡ್ ಮಾಡುತ್ತಾರೆ. ಮೃತರ ಇನ್ನಿತರ ಯಾವುದೇ ಸರ್ವೇ ನಂಬರ್ ಇದ್ದರೂ ಸೇರ್ಪಡೆ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


Spread the love

LEAVE A REPLY

Please enter your comment!
Please enter your name here