ವಿಜಯಸಾಕ್ಷಿ ಸುದ್ದಿ, ರೋಣ: ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ಕೂಲಿಕಾರರಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂದರ್ಭದಲ್ಲಿ ರೋಣ ತಾಲೂಕಿನ ಹುಲ್ಲೂರ ಗ್ರಾಮ-ಪಂಚಾಯಿತಿಯಲ್ಲಿ ಇ-ಕೆವೈಸಿ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ತಾಲೂಕು-ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರು ಭೇಟಿ ನೀಡಿ, ಖುದ್ದು ಫೋಟೋ ತೆಗೆದು ಇ-ಕೆವೈಸಿ ಪ್ರಕ್ರಿಯೆಯನ್ನು ನಡೆಸಿ ಜಾಗೃತಿ ಮೂಡಿಸಿದರು.
ಹುಲ್ಲೂರ ಗ್ರಾ.ಪಂಗೆ ಭೇಟಿ ನೀಡಿದ ಅವರು, ನರೇಗಾ ಕೂಲಿಕಾರರೊಂದಿಗೆ ಸಮಾಲೋಚನೆ ನಡೆಸಿ, ಇ-ಕೆವೈಸಿ ಪ್ರಕ್ರಿಯೆಯನ್ನು ಅಕ್ಟೋಬರ್ 31ರೊಳಗಾಗಿ ಪೂರ್ಣಗೊಳಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು.
ಇ-ಕೆವೈಸಿ ಮಾಡಿಸದಿದ್ದರೆ ನರೇಗಾ ಉದ್ಯೋಗ ಚೀಟಿಗಳು ರದ್ದು ಗೊಳ್ಳುವ ಸಾಧ್ಯತೆ ಇದೆ. ಇದರಿಂದ ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ಅವಕಾಶ ಕಳೆದುಕೊಳ್ಳುವ ಆತಂಕವಿದೆ. ಆದ್ದರಿಂದ ಎಲ್ಲರೂ ತಕ್ಷಣವೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಅವರು ಗ್ರಾಮಸ್ಥರಿಗೆ ತಿಳಿಸಿದರು. ಬೆಳಿಗ್ಗೆ ಮತ್ತು ಸಾಯಂಕಾಲದ ವೇಳೆಯಲ್ಲಿ ನೆಟ್‌ವರ್ಕ್ ಸಮಸ್ಯೆ ಕಡಿಮೆ ಇರುವುದರಿಂದ ಈ ಸಮಯದಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನು ವೇಗವಾಗಿ ನಡೆಸಲು ಸಿಬ್ಬಂದಿಗೆ ಸಲಹೆ ನೀಡಿದರು.
ರೋಣ ತಾಲೂಕಿನಲ್ಲಿ ಒಟ್ಟು 50090 ನರೇಗಾ ಕೂಲಿಕಾರರಿದ್ದು, ಈ ಪೈಕಿ ಸುಮಾರು 20758 ಇ-ಕೆವೈಸಿ ಪ್ರಕ್ರಿಯೆಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಉಳಿದ ಕೂಲಿಕಾರರಿಗೆ ಮುಂದಿನ ನಾಲ್ಕು ದಿನಗಳಲ್ಲಿ ಈ ಕಾರ್ಯವನ್ನು ಮುಗಿಸಲು ಗ್ರಾ.ಪಂ ಸಿಬ್ಬಂದಿಗಳಿಗೆ ಚಂದ್ರಶೇಖರ ಕಂದಕೂರು ತಾಕೀತು ಮಾಡಿದರು.
ತಾ.ಪಂ ವ್ಯವಸ್ಥಾಪಕ ದೇವರಾಜ ಸಜ್ಜನ ಶೆಟ್ಟರ್, ಹುಲ್ಲೂರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಗಣಕಯಂತ್ರ ನಿರ್ವಾಹಕರು, ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಎಂಐಎಸ್ ಸಂಯೋಜಕರು, ಬಿಎಫ್‌ಟಿ ಮತ್ತು ಗ್ರಾಮ ಕಾರ್ಯ ಮಿತ್ರರು ಉಪಸ್ಥಿತರಿದ್ದರು.


