ಹಣ ಗಳಿಕೆಯೊಂದೇ ಜೀವನದ ಗುರಿಯಲ್ಲ

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಬೇಲೂರು:ಹೊರಗಿನ ಕತ್ತಲೆ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಹಣ ಗಳಿಕೆಯೊಂದೇ ಜೀವನದ ಗುರಿಯಲ್ಲ. ಬದುಕಲು ಬೇಕಾದ ಜ್ಞಾನವನ್ನು ಸಂಪಾದಿಸುವುದು ಮುಖ್ಯ. ಚಿಂತೆ ಚಿಂತನಗೊಂಡಾಗ ಮಾನವನ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಸೋಮವಾರ ತಾಲೂಕಿನ ಪಡವಳಲು ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಾಲಯ ಲೋಕಾರ್ಪಣೆ, ನೂತನ ವಿಗ್ರಹಗಳ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಉನ್ನತ ಗುರಿ ಮತ್ತು ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ಆಶಾ ಕಿರಣ. ಧರ್ಮಾಚರಣೆ ಇಲ್ಲದ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗುವುದಿಲ್ಲ. ಯೋಗ್ಯ ಸಂಸ್ಕಾರ ದೊರೆತರೆ ಬೆಲೆಯುಳ್ಳ ಬದುಕು ಸಾರ್ಥಕಗೊಳ್ಳುತ್ತದೆ. ಸೌಹಾರ್ದಯುತ ಸಹಬಾಳ್ವೆ ಜೀವನದ ಪರಮ ಗುರಿಯಾಗಬೇಕು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಮರೆಯಬಾರದು. ಮೂಲ ಮರೆತರೆ ಬದುಕಿನಲ್ಲಿ ಸೋಲು ನಿಶ್ಚಿತ. ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ಹಿಂಬಾಲಿಸುತ್ತದೆ. ಸದ್ವಿದ್ಯೆ, ಉತ್ತಮ ಸಂಬಂಧ ಮತ್ತು ಆದರ್ಶಮಯ ಸ್ನೇಹ ಇದ್ದರೆ ಬಾಳೆಲ್ಲ ಸುಖಮಯವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಯೌವನ, ಆಯುಷ್ಯ, ಸಿರಿ-ಸಂಪತ್ತು ಶಾಶ್ವತವಲ್ಲ. ಸತ್ಕಾರ್ಯಗಳ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಮನುಷ್ಯನಲ್ಲಿ ಆತ್ಮ ಬಲ ಬೆಳೆಯಲು ಆಧ್ಯಾತ್ಮದ ಹಸಿವು ಮುಖ್ಯ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಜನರ ಭಾವನೆ ಬೆಳಗಲು ಶ್ರೀ ಗುರುವಿನ ಬೋಧಾಮೃತ ಬೇಕು. ಪಡುವಳಲು ಗ್ರಾಮದ ಸದ್ಭಕ್ತರು ಸುಂದರ ಭವ್ಯ ಮಂದಿರ ನಿರ್ಮಾಣ ಮಾಡಿ ಉದ್ಘಾಟಿಸುತ್ತಿರುವುದು ತಮ್ಮೆಲ್ಲರಲ್ಲಿರುವ ಧರ್ಮ ಶ್ರದ್ಧೆಗೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ಬೇಲೂರು ಕ್ಷೇತ್ರದ ಶಾಸಕ ಹೆಚ್.ಕೆ. ಸುರೇಶ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬೆಳೆಯುವ ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಬೆಳೆಸುವ ಅವಶ್ಯಕತೆಯಿದೆ. ಯುವ ಜನಾಂಗದಲ್ಲಿ ಸಂಸ್ಕಾರ-ಸದ್ವಿಚಾರಗಳು ಬೆಳೆದು ಬದುಕಿನ ಶ್ರೇಯಸ್ಸಿಗೆ ಕಾರಣವಾಗಬೇಕಾಗಿದೆ. ಉತ್ತಮ ಚಿಂತನೆಗಳಿಂದ ಬದುಕು ಸದೃಢಗೊಳ್ಳಲೆಂದರು.

ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ವೀರಶೈವ ಧರ್ಮ ಪ್ರತಿಪಾದಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಜೀವನ ಶ್ರೇಯಸ್ಸಿಗೆ ಸಹಕಾರಿಯಾಗಿವೆ ಎಂದರು.

ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿಗಳು ಮತ್ತು ಯಸಳೂರು ಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮದ ತತ್ವ ತ್ರಯಗಳ ಪರಿಪಾಲನೆಯಿಂದ ಬದುಕು ಬಲಗೊಳ್ಳುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಎಸ್.ಹೆಚ್. ರಾಜಶೇಖರ್, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಉದ್ಯಮಿ ಕೊರಟಿಗೆರೆ ಪ್ರಕಾಶ್, ಸಿದ್ದೇಶ ನಾಗೇಂದ್ರ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು. ರಾಮೇಗೌಡರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕಿ ಹೇಮಲತಾ ಬಿಕ್ಕೋಡು ಮತ್ತು ಪಡುವಳಲು ಶಿಕ್ಷಕಿ ಕೆ.ಎಸ್. ಲೀಲಾವತಿ ನಿರೂಪಣೆ ಮಾಡಿದರು.

ಅಡ್ಡಪಲ್ಲಕ್ಕಿ ಮಹೋತ್ಸವ

ಸಮಾರಂಭಕ್ಕೂ ಮುನ್ನ ಪಡುವಳಲು ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವ, ಕಳಸ-ಕನ್ನಡಿಯೊಂದಿಗೆ ಸಂಭ್ರಮದಿಂದ ಜರುಗಿತು. ಉತ್ಸವದಲ್ಲಿ ಕುಂಭ ಹೊತ್ತ ಮಹಿಳೆಯರು, ಆರತಿ ಹಿಡಿದ ಸುಮಂಗಲೆಯರು, ವೀರಗಾಸೆ ಮತ್ತು ಪುರವಂತರ ಕಲಾ ತಂಡಗಳು ಉತ್ಸವಕ್ಕೆ ಮೆರಗು ತಂದವು. ಸಮಾರಂಭದ ನಂತರ ಎಲ್ಲ ಸದ್ಭಕ್ತರಿಗೆ ಅನ್ನ ದಾಸೋಹ ನೆರವೇರಿತು.


Spread the love

LEAVE A REPLY

Please enter your comment!
Please enter your name here