ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 4.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ನಡುಗಿದ ಅನುಭವದಿಂದ ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ.
ಬೆಳಗ್ಗೆ 5.35ರ ಸುಮಾರಿಗೆ ಭೂಕಂಪದ ಕಂಪನ ಅನುಭವವಾಗಿದ್ದು, ಇದರ ಕೇಂದ್ರಬಿಂದು ಪಟ್ಟನ್ ಪ್ರದೇಶದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಭೂಕಂಪದಿಂದ ಯಾವುದೇ ಸಾವು-ನೋವು, ಗಾಯಗಳು ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಈ ಕುರಿತು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS) ತನ್ನ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದೇ ದಿನ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ 4.6 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು NCS ತಿಳಿಸಿದೆ.
NCS ಹೇಳಿಕೆಯ ಪ್ರಕಾರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಂಭವಿಸಿದ ಭೂಕಂಪವು ಭೂಮಿಯ ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಭೂಕಂಪದ ಅಕ್ಷಾಂಶ 9.03 ಡಿಗ್ರಿ ಉತ್ತರ ಹಾಗೂ ರೇಖಾಂಶ 92.78 ಡಿಗ್ರಿ ಪೂರ್ವವಾಗಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ದೃಢಪಡಿಸಲಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ವಿಶ್ವದ ಅತ್ಯಂತ ಭೂಕಂಪನಶೀಲ ಪ್ರದೇಶಗಳಲ್ಲಿ ಒಂದಾಗಿದ್ದು, 1893–1984ರ ಭಾರತದ ಭೂಕಂಪನ ವಲಯ ನಕ್ಷೆಯ ಪ್ರಕಾರ ಈ ಪ್ರದೇಶವನ್ನು ಭೂಕಂಪನ ವಲಯ–V ಎಂದು ವರ್ಗೀಕರಿಸಲಾಗಿದೆ.



