ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜೀವ ವಿಮಾ ನಿಗಮ ಕಚೇರಿಯ ಗದಗ ಶಾಖೆ 1ರಲ್ಲಿ ಪರಿಸರ ಸ್ನೇಹಿ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕರಾದ ಎಚ್.ಎಮ್. ಭಜಂತ್ರಿ ಮತ್ತು ಎಬಿಎಂ ವಿಕ್ರಮ ಶೀಲವಂತ ಇವರನ್ನು ಸಸಿ ನೀಡುವುದರ ಮೂಲಕ ಸನ್ಮಾನಿಸಲಾಯಿತು. ವಿಮಾ ಪ್ರತಿನಿಧಿಗಳು ಚೈತನ್ಯ ಬಳಗದ ಮೂಲಕ ಬಿ.ಬಿ. ದೇಶಪಾಂಡೆ ಮತ್ತು ಅವರ ಪತ್ನಿ ಭಾರತಿ ದೇಶಪಾಂಡೆಯವರನ್ನು ಶಿಕ್ಷಕರ ದಿನಾಚರಣೆ ನಿಮಿತ್ತ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಬಿ. ದೇಶಪಾಂಡೆ ಮಾತನಾಡಿ, ನಮ್ಮ ಜೀವ ವಿಮಾ ನಿಗಮದ ಪ್ರತಿನಿಧಿಗಳು ಪಾಲಿಸಿದಾರರಿಗೆ ಒಂದು ಪಾಲಿಸಿ ಮಾಡಿಸಿದಾಗ ಒಂದು ಸಸಿ ನೀಡಿ ಅದನ್ನು ಬೆಳಸಲು ಪ್ರೇರೇಪಿಸಬೇಕು. ಸಾಗವಾನಿ, ತೇಗ, ನಿಂಬೆ, ಪೇರಲ, ಅಶ್ವಗಂಧ, ತುಳಸಿ, ಶತಾವರಿ, ಕುಪ್ಪೆ, ನುಗ್ಗಿ, ಬೆಟ್ಟದ ನೆಲ್ಲಿಕಾಯಿ, ನೆಲನೆಲ್ಲಿ ಹಾಗೂ ಇನ್ನಿತರ ಆಯುರ್ವೇದ ಸಸ್ಯಗಳನ್ನು ನೀಡಿ ಅವುಗಳ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.
ಬಿಎಂ ಎಚ್.ಎಂ. ಭಜಂತ್ರಿ ಮಾತನಾಡಿ, ಪರಿಸರ ರಕ್ಷಿಸುವ ಈ ಕಾಯಕದಲ್ಲಿ ಎಲ್ಲರ ಜೊತೆಗೆ ಸಾಥ್ ನೀಡುತ್ತೇವೆ. ಪರಿಸರ ರಕ್ಷಿಸುವ ಕಾರ್ಯಕ್ಕಿಂತ ಯಾವ ಕಾರ್ಯವೂ ಹೆಚ್ಚಿನದಲ್ಲ ಎಂದು ತಿಳಿಸಿದರು.
ಚೈತನ್ಯ ಬಳಗದ ಪ್ರತಿನಿಧಿ ಮೌನೇಶ ಭಜಂತ್ರಿ, ಮಂಜುನಾಥ ಸೊಪ್ಪಿನಮಠ, ವಿನಯ ಶಲವಡಿ, ಉಮೇಶ ಅಣ್ಣಿಗೇರಿ, ಕವಿತಾ ಉಪವಾಸಿ, ಶ್ರೀದೇವಿ ಕಮ್ಮಾರ, ಲಕ್ಷ್ಮೀ ಸೋಮಣ್ಣವರ, ರೇಖಾ ಸಾತಣ್ಣವರ, ದಿಲಶಾದ ಸುಂಕದ, ರೇಖಾ ಕುರಿ, ವಿರುಪಾಕ್ಷಪ್ಪ ಮಳ್ಳಿ, ನಾಗರತ್ನಾ ಮಕ್ತಾಲಿ ಹಾಗೂ ಇನ್ನಿತರರು ತಮ್ಮ ಗುರುಗಳ ಅಣತಿಯಂತೆ ಎಲ್ಲ ಪಾಲಿಸಿದಾರರಿಗೆ ಆಯುರ್ವೇದ ಸಸ್ಯ ನೀಡುವುದಾಗಿ ತಿಳಿಸಿದರು.