ವಿಜಯಸಾಕ್ಷಿ ಸುದ್ದಿ, ಗದಗ : ಜಾತಿ, ಮತ, ಪಕ್ಷ ಹಾಗೂ ಪಂಗಡ ಮೀರಿ ಸರ್ವರಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆ ಬದುಕು-ಭಾವನೆ, ಶ್ರೀಮಂತ-ಬಡವರ ನಡುವಿನ ಚುನಾವಣೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ 22 ಹಾಗೂ 30ನೇ ವಾರ್ಡ್ಗಳಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಬಡವರು ಮಕ್ಕಳ ಆರೋಗ್ಯ ತಪಾಸಣೆ, ಔಷಧಿ ಖರೀದಿ ಸೇರಿ ದಿನನಿತ್ಯ ಬಳಕೆ ಹಾಗೂ ಹಬ್ಬದ ಸಂದರ್ಭಗಳಲ್ಲಿ ಸಾಮಗ್ರಿಗಳ ಖರೀದಿಗೆ ಆರ್ಥಿಕವಾಗಿ ಸಹಾಯವಾಗಿದೆ.
ಬಡವರು, ಮಹಿಳೆಯರು ಗ್ಯಾರಂಟಿ ಯೋಜನೆಗಳನ್ನು ಸ್ವಾಗತಿಸಿದ್ದಾರೆ. ಅದರ ಪರಿಣಾಮವಾಗಿ ಪ್ರತಿಯೊಂದು ಕುಟುಂಬದ ಮಹಿಳೆಯರು ಮನೆಯಲ್ಲಿರುವ ಪುರುಷರ, ಮಕ್ಕಳಿಗೆ ಮನವರಿಕೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಪ್ರೇರೇಪಿಸಬೇಕು ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ವೈದ್ಯ ಡಾ. ಕಬಾಡಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಶಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಅಸೂಟಿ, ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಮುಖಂಡರಾದ ಆಂಜನೇಯ ಕಟಗಿ, ರಮೇಶ ಮುಳಗುಂದ, ಜಿ.ಎಂ. ದಂಡಿನ, ನಾಗರಡ್ಡಿ ನಿಡಗುಂದಿ, ಮಾಯಪ್ಪ ಪೂಜಾರ, ವಿಜಯ ಮುಳಗುಂದ, ಗಾಳೆಪ್ಪ ಲಕ್ಷ್ಮೇಶ್ವರ, ಮುಖಂಡರಾದ ವಿರೂಪಾಕ್ಷಪ್ಪ ಅಕ್ಕಿ, ರವಿ ಕಮತರ, ಅಕ್ಬರಸಾಬ್ ಬಬರ್ಚಿ, ಎಸ್.ಆರ್. ಹಿರೇಮಠ, ಎಸ್.ಎಸ್. ಬಿಜಾಪುರ, ಆರ್.ಎಚ್. ತೋರಗಲ್ಲ, ಎಂ.ಟಿ. ಹೆಸರೂರ, ಐ.ಜಿ. ಪಠಾಣ್, ಜಿ.ಸಿ. ಮುಲ್ಲಾ, ಇಸ್ಮಾಯಿಲ್ ರೋಣದ, ದಾವೂದ್‌ಅಲಿ ಉಳ್ಳಾಗಡ್ಡಿ, ದಾವೂದಸಾಬ್ ಕುರಹಟ್ಟಿ ಸೇರಿ ಅನೇಕರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪಿಸಿ ದೂರದೃಷ್ಟಿ ಮೆರೆದ, ಗದಗ ಜಿಲ್ಲೆಯನ್ನು ಅಭಿವೃದ್ಧಿಗೊಳಿಸಿದ ಸಚಿವ ಎಚ್.ಕೆ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಮುಂದುವರಿಯುವೆ. ತಮ್ಮ ಸಲಹೆಗಳನ್ನು ಸದಾ ಸ್ವೀಕರಿಸಿ ಸಾಗುವೆ ಎಂದರು.