ಅಕ್ರಮವಾಗಿ ದುಬೈನಿಂದ ಚಿನ್ನ ಸಾಗಣೆ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ನಟಿ ರನ್ಯಾರಾವ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ರನ್ಯಾ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಎಂಟ್ರಿ ಆಗಿದ್ದು ತನಿಖೆ ಆರಂಭಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಯ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ರನ್ಯಾ ರಾವ್ ಪ್ರಕರಣದಲ್ಲಿ ಇದುವರೆಗೂ ಸಿಬಿಐ ಅಧಿಕಾರಿಗಳು ಹಾಗೂ ಡಿಆರ್ಐ ಅಧಿಕಾರಿಗಳು ಮಾತ್ರ ವಿಚಾರಣೆ ನಡೆಸುತ್ತಿದ್ದರು. ಇದೀಗ ಪ್ರಕರಣ ಇಡಿಯಿಂದ ಇಸಿಐಆರ್ ದಾಖಲಾಗಿದೆ. ಇಸಿಐಆರ್ ಎಂದರೆ ಎನ್ಫೋರ್ಸ್ಮೆಂಟ್ ಕೇಸ್ ಇನ್ಫಾರ್ಮೇಷನ್ ರಿಪೋರ್ಟ್. ಅಕ್ರಮ ಹಣ ವರ್ಗಾವಣೆ ವಿಚಾರ ತಿಳಿದಿರುವುದರಿಂದ ಈ ಕೇಸ್ ದಾಖಲಾಗಿದೆ.
ಇಸಿಐಆರ್ ದಾಖಲಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರಿನ ಹಲವು ಕಡೆ ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿರುವ ರನ್ಯಾ ರಾವ್ ಫ್ಲ್ಯಾಟ್ ಮೇಲೆ ಈ ದಾಳಿ ನಡೆದಿದ್ದು, ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಯಾವೆಲ್ಲ ಮಾಹಿತಿ ಸಿಕ್ಕಿದೆ ಎಂಬ ವಿಚಾರ ಇನ್ನಷ್ಟೇ ತಿಳಿದು ಬರಬೇಕಿದೆ.
ಗೋಲ್ಡ್ ಸ್ಮಗ್ಲಿಂಗ್ ವಿಚಾರದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರೋದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹಾವಾಲಾ ದಂಧೆ ಮೂಲಕ ಭಾರತದಿಂದ ಹಣ ದುಬೈಗೆ ಹೋಗುತ್ತಿತ್ತು. ಬಳಿಕ ಚಿನ್ನದ ಗಟ್ಟಿ ರೂಪದಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.