ಕಾರವಾರ: ಕಾರವಾರ ಶಾಸಕ ಸತೀಶ್ ಸೈಲ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ಎರಡು ದಿನಗಳ ಕಾರ್ಯಾಚರಣೆ ‘ಮಹಾ ಬೇಟೆ’ಯಾಗಿ ಪರಿಣಮಿಸಿದೆ. ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯ ಹಲವೆಡೆ ನಡೆದ ಈ ದಾಳಿಯಲ್ಲಿ, ಅಧಿಕಾರಿಗಳು ಬರೋಬ್ಬರಿ 14.13 ಕೋಟಿ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಹೌದು 1.68 ಕೋಟಿ ನಗದು, 6.75 ಕೆಜಿ ಚಿನ್ನದ ಬಿಸ್ಕೆಟ್‌ಗಳು ಮತ್ತು 14.13 ಕೋಟಿ ಹಣ ಹೊಂದಿರುವ ಬ್ಯಾಂಕ್ ಖಾತೆಯನ್ನು ಜಾರಿ ನಿರ್ದೇಶನಾಲಯ ಸೀಜ್ ಮಾಡಿದೆ. ಅಕ್ರಮ ಅದಿರು ಪ್ರಕರಣದಲ್ಲಿ ಜಾಮೀನಿನ ಮೇಲೆ ಶಾಸಕ ಸತೀಶ್ ಸೈಲ್ ಹೊರಗಿದ್ದಾರೆ. ಆ.13 ಮತ್ತು 14 ರಂದು ಇ.ಡಿ ಅಧಿಕಾರಿಗಳು, ಶಾಸಕರ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು.
ಈ ವೇಳೆ ಅಪಾರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆಯನ್ನು ಸತೀಶ್ ಸೈಲ್ ಎದುರಿಸುತ್ತಿದ್ದಾರೆ. ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಹೊತ್ತಲ್ಲೇ ಇ.ಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಕಾರವಾರ (ಉತ್ತರ ಕನ್ನಡ), ಗೋವಾ, ಮುಂಬೈ ಮತ್ತು ನವದೆಹಲಿಯ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.