ಬೆಂಗಳೂರು: ಶಿಕ್ಷಣ ಅಭಿವೃದ್ಧಿ, ರೈಲ್ವೇ ಯೋಜನೆಗಳು ಜನರ ಬದುಕಿನ ಗತಿ ಬದಲಿಸಿವೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆಡಳಿತಕ್ಕೆ ಜನ ಮೆಚ್ಚುಗೆ ದೊಡ್ಡದಾಗಿಯೇ ಸಿಗುತ್ತಿದೆ.
ಮೋದಿ ದೂರದೃಷ್ಟಿ ಯೋಜನೆಗಳಿಗೆ ಜನರ ಬೆಂಬಲ ಸಿಕ್ಕಿದೆ. ಜನಧನ್, ಉಜ್ವಲಾ, ಜಲಜೀವನ್ ಯೋಜನೆಗಳು ಜನರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿವೆ. ಮೂಲಸೌಕರ್ಯ ವೃದ್ಧಿ, ಶಿಕ್ಷಣ ಅಭಿವೃದ್ಧಿ, ರೈಲ್ವೇ ಯೋಜನೆಗಳು ಜನರ ಬದುಕಿನ ಗತಿ ಬದಲಿಸಿವೆ ಎಂದರು.
ಕಳೆದ 60 ವರ್ಷದಲ್ಲಿ ಆಗದಿರುವ ಕೆಲಸ ಪ್ರಧಾನಿ ಮೋದಿ ಅವಧಿಯಲ್ಲಾಗಿದೆ. ಒಂದು ಮತ್ತು ಎರಡನೇ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ದೇಶದ ಯಾವ ಭಾಗಕ್ಕೆ ಹೋದರೂ ಕಾಣುತ್ತದೆ. 12 ಲಕ್ಷದವರೆಗೆ ತೆರಿಗೆ ಇಲ್ಲದಿರುವುದು ಐಐಎಂ, ಐಐಟಿ ಇದೆಲ್ಲಾ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ.
ವಾಜಪೇಯಿ ಅವಧಿ ಬಳಿಕ ಯುಪಿಎ ಅವಧಿಯಲ್ಲಿ ಭಾರತದ ಆರ್ಥಿಕತೆ ಬಹಳ ಕೆಟ್ಟ ಸ್ವರೂಪದಲ್ಲಿ ಇತ್ತು. 2014 ರಲ್ಲಿ ಬ್ಯಾಂಕಿಂಗ್ ವಲಯ ಅಷ್ಟು ಉತ್ತಮವಾಗಿರಲಿಲ್ಲ. ಪ್ರಧಾನಿ ಮೋದಿ ಅದಕ್ಕೊಂದು ಆಯಾಮ ನೀಡಿದರು. ಪ್ರತಿ ವರ್ಷ ಹೈವೇ, ರೈಲ್ವೇ, ಏರ್ ಪೋರ್ಟ್ ಅಭಿವೃದ್ಧಿ ಆಯಿತು ಎಂದು ತಿಳಿಸಿದ್ದಾರೆ.