ವಿಜಯಸಾಕ್ಷಿ ಸುದ್ದಿ, ರೋಣ: ಮಲ್ಲಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂದಿಗವಾಡ ಗ್ರಾಮದಲ್ಲಿ ಗ್ರಾ.ಪಂ ಅನುದಾನದಡಿಯಲ್ಲಿ ಅಭಿವೃದ್ಧಿಪಡಿಸಲಾದ ಗ್ರಾಮ ಛಾವಡಿ ಮತ್ತು ಅರಿವು ಕೇಂದ್ರ (ಗ್ರಂಥಾಲಯ)ದ ಉದ್ಘಾಟನಾ ಸಮಾರಂಭವು ಗುರುವಾರ ವಿಜೃಂಭಣೆಯಿಂದ ನಡೆಯಿತು.
ತಹಸೀಲ್ದಾರ ನಾಗರಾಜ್ ಕೆ ರೋಣ ಗ್ರಾಮ ಆಡಳಿತ ಅಧಿಕಾರಿ ಕೊಠಡಿಯನ್ನು ಉದ್ಘಾಟಿಸಿ, ಕರ್ನಾಟಕ ಸರಕಾರದ ಪೋತಿ ಖಾತೆ ಕಾರ್ಯಕ್ರಮ ದಡಿ ರಾಜ್ಯದ ಮೊದಲ ಪೋತಿ ಖಾತೆಯಾಗಿ ಈ ಕೊಠಡಿ ಆಗಿದೆ. ಗ್ರಾಮಸ್ಥರು ಈ ಸೌಲಭ್ಯದ ಸದುಪಯೋಗವನ್ನು ಪಡೆಯಬೇಕೆಂದು ಕರೆ ನೀಡಿದರಲ್ಲದೆ, ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಹಾಗೂ ಗ್ರಾಮ ಆಡಳಿತ ಅಧಿಕಾರಿ ವಾಯ್.ಡಿ. ಬಡಿಗೇರರಿಗೆ ಅಭಿನಂದನೆ ಸಲ್ಲಿಸಿದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರ ಅರಿವು ಕೇಂದ್ರದ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು, ಯುವಕರು ಹಾಗೂ ವಯಸ್ಕರು ಮೊಬೈಲ್‌ನಿಂದ ದೂರವಿದ್ದು, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಸಂಸ್ಕಾರಯುತ ಬದುಕಿಗೆ ಶಿಕ್ಷಣ ಅತ್ಯಗತ್ಯ. ಎಲ್ಲರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಶಿಕ್ಷಣದಲ್ಲಿ ಶಿಕ್ಷೆ ಮತ್ತು ಬಹುಮಾನ ಎರಡೂ ಅವಶ್ಯಕ. ಶಿಕ್ಷಕರು ಮಕ್ಕಳನ್ನು ಶಿಸ್ತಿನಿಂದ ಕಲಿಸಿದಾಗ ಪೋಷಕರು ವಿರೋಧಿಸಬಾರದು. ಈಗ ಶಿಕ್ಷಕರು ಬುದ್ಧಿ ಕಲಿಸದಿದ್ದರೆ, ಮುಂದೆ ಪೊಲೀಸ್ ಸ್ಟೇಷನ್‌ನಲ್ಲಿ ಬುದ್ಧಿ ಕಲಿಯಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಧಾರ್ಮಿಕ ಸಾನ್ನಿಧ್ಯವನ್ನು ವೇ.ಮೂ. ಸಿದ್ದಯ್ಯ ಹಿರೇಮಠ, ಅಧ್ಯಕ್ಷತೆಯನ್ನು ಹನಮಂತಗೌಡ ಹೂಲ್ಲೂರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಕರಿಯಮ್ಮ ಚಲವಾದಿ, ಸದಸ್ಯರಾದ ಬಸಮ್ಮ ಟಕ್ಕೆದ, ಕಸ್ತೂರೆವ್ವ ಜಂಪಣ್ಣನವರ, ಮೈಲಾರಪ್ಪ ಕರಿಲಿಂಗಣ್ಣವರ, ಕಮಲಾಕ್ಷಿ ಭರಮಗೌಡ್ರ, ದ್ರಾಕ್ಷಾಯಣಿ ಹಡಪದ, ಸುಮಂಗಲಾ ಕೊಳ್ಳದ, ಗಿರಿಜವ್ವ ಹಟ್ಟಿ, ವಿಕ್ರಮ ದಾನರಡ್ಡಿ, ಯಲ್ಲಪ್ಪ ಮಳಗಿ, ವೀರನಗೌಡ ಕಟ್ಟಿ, ಸುರೇಶ ವತ್ತಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ಗುರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಡಿ.ಎಸ್. ಹಂಚಿನಾಳ ಸ್ವಾಗತಿಸಿದರು. ಮುತ್ತು ಅರಹುಣಸಿ ವಂದಿಸಿದರು.