ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಮತ್ತು ಕಲಿಕೆಯನ್ನು ಸಂತೋಷದಾಯಕ ಅನುಭವವನ್ನಾಗಿ ಮಾಡಲು ಎಫ್‌ಎಲ್‌ಎನ್ ಒಂದು ವಿಶೇಷ ಕಾರ್ಯಕ್ರಮವಾಗಿದ್ದು, ಇದರಲ್ಲಿ ಮಕ್ಕಳನ್ನು ಚಟುವಟಿಕೆಗಳ ಮೂಲಕ ಗುರುತಿಸಬಹುದು. ಕಲಿಕೆ ಎನ್ನುವುದು ಪುಸ್ತಕದಿಂದ ಕಲಿಯುವದಷ್ಟೇ ಅಲ್ಲ, ಅದು ಅನುಭವದಿಂದ ಕಲಿಯುವದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕಿನಾಯ್ಕ ಅಭಿಪ್ರಾಯಪಟ್ಟರು.
ತಾಲೂಕಿನ ಪಿಎಂಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಹೆಬ್ಬಾಳ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೆಬ್ಬಾಳ ಸಿಆರ್‌ಪಿ ತಿರಕಪ್ಪ ಪೂಜಾರ, ಈ ಕಲಿಕಾ ಹಬ್ಬದಲ್ಲಿ ಒಟ್ಟು 11 ಸ್ಪರ್ಧೆಗಳಿರುತ್ತವೆ. ಆದರೆ ನಾವು ಇಲಾಖೆಯ ವತಿಯಿಂದ 7 ಸ್ಪರ್ಧೆಗಳಿಗೆ ಅವಕಾಶ ನೀಡಿದ್ದು, ಅದರಲ್ಲಿ ಗಟ್ಟಿ ಓದು, ಕತೆ ಹೇಳುವದು, ಸಂತೋಷದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಟಿಕಾಂಶ, ಪೋಷಕರ ಹಾಗೂ ಶಿಕ್ಷಕರ ಸಂಬಂಧ ಕುರಿತು ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಕನ್ನಡ ಮತ್ತು ಗಣಿತ ವಿಷಯಗಳಲ್ಲಿ ಸ್ಪರ್ಧೆ ಹಾಗೂ ಚಟುವಟಿಕೆ ಮೂಲಕ ತಿಳಿಯಲು ಸಹಕಾರಿಯಾಗಿದ್ದು, ಮಕ್ಕಳು ಶಾಲೆಯನ್ನು ತಪ್ಪಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರದಾಗಿರುತ್ತದೆ. ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದರು.
ಸರಕಾರಿ ನೌಕರರ ಸಂಘದ ಶಿರಹಟ್ಟಿ ಘಟಕದ ಗೌರವಾಧ್ಯಕ್ಷ ಎಸ್.ಕೆ. ಪಾಟೀಲ ಮಾತನಾಡಿ, ಶಾಲೆಯಲ್ಲಿ ಕಲಿತರೂ ಕೂಡ ಮನೆಯಲ್ಲಿ ಪುನರಾವರ್ತನೆ ಆಗಬೇಕು. ಅಂದಾಗ ವಿದ್ಯಾರ್ಥಿ ಕಲಿಕೆಗೆ ಮನದಟ್ಟಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಉಪನಿರ್ದೇಶಕ (ಅಭಿವೃದ್ಧಿ) ಜಿ.ಎಂ. ಮುಂದಿನಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಫಕ್ಕಿರಪ್ಪ ನರಸಮ್ಮನವರ, ಎಸ್‌ಡಿಎಂಸಿ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲ, ಉಪಾಧ್ಯಕ್ಷರಾದ ನೀಲಮ್ಮ ನಡುವಿನಕೇರಿ, ಸಿಆರ್‌ಪಿಗಳಾದ ತಿರಕಪ್ಪ ಪೂಜಾರ, ಸತೀಶ ಪಶುಪತಿಹಾಳ, ಆರ್. ಮಾಂತೇಶ, ಸಿ.ವಿ. ವಡಕಣ್ಣನವರ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಫ್.ವಾಯ್. ಪಾಟೀಲ, ಬನಶಂಕರಿ ದೇವಿ ಕಾಲೇಜಿನ ಪ್ರಾಚಾರ್ಯ ನವೀನ ಅಳವಂಡಿ, ಶಾಲೆಯ ಪ್ರಧಾನ ಗುರುಗಳಾದ ವಿ.ಎನ್. ಪಾಟೀಲ ಸೇರಿದಂತೆ ಹೆಬ್ಬಾಳ ಕ್ಲಸ್ಟರಿನ ಎಲ್ಲಾ ಶಾಲೆಗಳ ಪ್ರಧಾನ ಗುರುಗಳು, ಸಿಬ್ಬಂದಿ ವರ್ಗ, ನಿರ್ಣಾಯಕರು, ಗ್ರಾಮದ ಗುರು-ಹಿರಿಯರು ಪಾಲ್ಗೊಂಡಿದ್ದರು. ಆರ್.ಟಿ. ಶಿವಪ್ಪಯ್ಯನಮಠ ಕಾರ್ಯಕ್ರಮ ನಿರ್ವಹಿಸಿದರು. ಕಲಿಕಾ ಹಬ್ಬದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಣ ಎನ್ನುವುದು ಹುಲಿ ಹಾಲು ಇದ್ದಂತೆ. ಅದನ್ನು ಕುಡಿದವರು ಘರ್ಜಿಸಲೇಬೇಕು. ಉತ್ತಮ ಶಿಕ್ಷಣ ಪಡೆದುಕೊಂಡವರು ಸಮಾಜದಲ್ಲಿ ತಲೆ ಎತ್ತಿ ನಡೆಯಲು ಸಾಧ್ಯ. ತಾಯಿ ಮೊದಲ ಗುರುವಾಗಿದ್ದು, ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಮಗುವಿನ ಕಡೆಗೆ ಗಮನ ನೀಡಬೇಕು. ಮಕ್ಕಳ ಕೈಗೆ ಮೊಬೈಲ್ ನೀಡದೇ ಪುಸ್ತಕ ನೀಡಿ ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು ಎಂದು ಎಚ್. ನಾಣಕಿನಾಯ್ಕ ಕಿವಿಮಾತು ಹೇಳಿದರು.



