ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಸರಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಗೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಗ್ರಾಮ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಸಹಕಾರದಿಂದ ಮಕ್ಕಳ ಗ್ರಾಮ ಸಭೆಯಲ್ಲಿನ ಮಕ್ಕಳ ಬೇಡಿಕೆಯಂತೆ ಈ ಯಂತ್ರ ವಿತರಿಸಲು ಸಾಧ್ಯವಾಯಿತು ಎಂದರು.
ಗ್ರಾ.ಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚು ಒತ್ತು ನೀಡಿ ಮುನ್ನೆಲೆಗೆ ತರಬೇಕು ಎಂದರು. ಗ್ರಾ.ಪಂ ಸದಸ್ಯ ಪೀರಸಾಬ ನದಾಫ ಮಾತನಾಡಿ, ಮಕ್ಕಳಿಗೆ ಮುಖ್ಯವಾಗಿ ಶುದ್ಧವಾದ ಆಹಾರ, ನೀರು ಮತ್ತು ಗುಣಮಟ್ಟದ ಶಿಕ್ಷಣದ ಅವಶ್ಯಕತೆ ಇದ್ದು, ನಾವೆಲ್ಲರೂ ಸೇರಿ ಅಂತಹ ಪರಿಸರವನ್ನು ನಿರ್ಮಿಸಬೇಕಾಗಿದೆ ಎಂದರು.
ತಾಲೂಕಾ ಅಕ್ಷರ ದಾಸೋಹ ನಿರ್ದೇಶಕ ಶಂಕರ ಹಡಗಲಿ ಮಾತನಾಡಿ, ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೆ ದಿವ್ಯ ಔಷಧವಾಗಿದ್ದು, ಅದನ್ನು ಎಲ್ಲರಿಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಖಂಡು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯರಾದ ಅನ್ನಪೂರ್ಣ ರಿತ್ತಿ, ರಜೀಯಾಬೇಗಂ ತಹಸೀಲ್ದಾರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸಿದ್ದಮ್ಮ ಸಜ್ಜನರ, ಚಂದ್ರಶೇಖರ ಬಣವಿ, ಫಕ್ಕೀರಪ್ಪ ತಳವಾರ, ಮಲ್ಲಪ್ಪ ಅಬ್ಬಿಗೇರಿ, ಚನ್ನಪ್ಪ ಯಲಿಶಿರುಂದ, ಈಶಪ್ಪ ಹಡಗಲಿ, ಜ್ಯೋತಿ ಹಳ್ಳಿ, ಯಶೋದಾ ಉದ್ದಾರ, ರೇಣುಕಾ ಹಿರೇಹಾಳ, ಸುವರ್ಣ ಗುಂಜಳ, ಜುಲೇಖಾಬಿ ದೌಲತ್ತರ ಉಪಸ್ಥಿತರಿದ್ದರು.