ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ `ಮಿಶನ್ ವಿದ್ಯಾಕಾಶಿ’ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಓದುಬರಹ ಸುಧಾರಣೆ, ಎಸ್‌ಎಸ್‌ಎಲ್‌ಸಿ ಅನುತ್ತಿರ್ಣತೆಯ ಪ್ರಮಾಣ ಕಡಿಮೆ ಮಾಡುವುದು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಹೆಚ್ಚು ರ‍್ಯಾಂಕ್ ಗಳಿಸುವ ಉದ್ದೇಶವನ್ನು ಮಿಶನ್ ವಿದ್ಯಾಕಾಶಿ ಹೊಂದಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಬುಧವಾರ ಬೆಳಿಗ್ಗೆ ನಗರದ ಕೆ.ಇ. ಬೋರ್ಡ್ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಶಾಲಾ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಮಿಶನ್ ವಿದ್ಯಾಕಾಶಿ ಯೋಜನೆಯಡಿ ವಿವಿಧ ತಾಲೂಕುಗಳ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ `ನಮ್ಮ ಗುರಿ ನೂರರತ್ತ-ಪ್ರೇರಣಾ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.
ಧಾರವಾಡ ಜಿಲ್ಲೆಯಿಂದ ಸುಮಾರು 29 ಸಾವಿರ ಮಕ್ಕಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಮ್ಮ ಹೆಸರು ನೋಂದಾಯಿಸಿಕೊAಡಿದ್ದಾರೆ. ಎಲ್ಲ ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಅವರ ಕಲಿಕಾಗುಣಮಟ್ಟಕ್ಕೆ ಅನುಗುಣವಾಗಿ ಶಿಕ್ಷಕರಿಂದ ಪ್ರತ್ಯೇಕವಾಗಿ ಮತ್ತು ವಿಶೇಷವಾಗಿ ಓದು ಬರಹ ಕಲಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಗೆ ಈ ಬಾರಿ ಹೆಚ್ಚು ರ‍್ಯಾಂಕ್ ತರಬೇಕು ಎಂಬ ಹಿನ್ನಲೆಯಲ್ಲಿ ಚಾಣಾಕ್ಷ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಇಲಾಖೆ ಮೂಲಕ ಪ್ರತಿ ತಾಲೂಕಿನಲ್ಲಿ ಗುರುತಿಸಿ, ಅವರಿಗೆ ಪ್ರೋತ್ಸಹ ನೀಡಲಾಗುತ್ತಿದೆ. ಅದರಂತೆ ಪ್ರತಿ ತಾಲೂಕಿನಿಂದ ವಿಶೇಷವಾಗಿ 20 ವಿದ್ಯಾರ್ಥಿಗಳನ್ನು ಅವರ ಶೈಕ್ಷಣಿಕ ಸಾಧನೆ, ಪರೀಕ್ಷಾ ಗುಣಮಟ್ಟ ಗಮನಿಸಿ, ನಮ್ಮ ಗುರಿ ನೂರರತ್ತ ಪ್ರೇರಣಾ ಕಾರ್ಯಾಗಾರದಲ್ಲಿ ತರಬೇತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕೆ.ಇ. ಬೋರ್ಡ್ ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ರಾಜಪೂರೋಹಿತ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಎಂಬುದು ಶೈಕ್ಷಣಿಕ ಬದುಕಿನ ಮೊದಲ ಮೆಟ್ಟಿಲು. ಭಕ್ತಿ, ಶ್ರದ್ಧೆ ಮತ್ತು ಹೃದಯದಿಂದ ಓದಬೇಕು. ಅಂದಾಗ ಮಾತ್ರ ಶಿಕ್ಷಣ ಒಲಿಯುತ್ತದೆ. ಓದುಬರಹವನ್ನು ಪ್ರೀತಿಸಿ, ಮೆಚ್ಚಿ ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಉಪಯೋಜನಾಧಿಕಾರಿ ಎಸ್.ಎಮ್. ಹುಡೆದಮನಿ, ಡೈಟ್ ಹಿರಿಯ ಉಪನ್ಯಾಸಕ ಎ.ಎ. ಖಾಜಿ, ಶಿಕ್ಷಣ ಅಧಿಕಾರಿ ನಾಫೀಸಾಬಾನು ದಾವಲಸಾಬನವರ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಕೆ.ಇ. ಬೋರ್ಡ್ ಸಂಸ್ಥೆಯ ಪಿಯು ಕಾಲೇಜ್ ಪ್ರಾಚಾರ್ಯ ಎನ್.ಎಸ್. ಗೋವಿಂದರಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು. ಸಹಾಯಕ ಸಮನ್ವಯ ಅಧಿಕಾರಿ ರೇಣುಕಾ ಅಮಲಜೇರಿ ವಂದಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಪರೀಕ್ಷೆಗಳನ್ನು ವೇಳಾಪಟ್ಟಿಗೆ ಅನುಗುಣವಾಗಿ, ಏಕಾಗ್ರತೆ ಮತ್ತು ಯೋಜನಾಬದ್ಧವಾಗಿ ತಯಾರಿ ಮಾಡಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆಗೆ ಇದು ಮುಖ್ಯ ಕಾಲವಾಗಿದ್ದು, ಪ್ರತಿದಿನ ವಿಷಯವಾರು ಪುನರ್ ಮನನ ಮಾಡಿಕೊಳ್ಳಬೇಕೆಂದು ತಿಳಿಸಿದರು.