ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ಮಕ್ಕಳು ಸಾಕ್ಷಾತ್ ದೇವರು. ಸಂಸ್ಥೆಗಳು ದೇವಸ್ಥಾನ ಇದ್ದಂತೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.
ಅವರು ಕಳಸಾಪೂರ ಗ್ರಾಮದ ಬ್ರೈಟ್ ಹಾರಿಜನ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.
ದೇವಸ್ಥಾನಕ್ಕೆ ಹೋದರೆ ಒಂದು ದೇವರು ಕಾಣಲು ಸಾಧ್ಯ. ಆದರೆ ಶಿಕ್ಷಣ ಸಂಸ್ಥೆಯಲ್ಲಿ ಯಾವ ಜಾತಿ, ಮತ, ಭೇದ-ಭಾವವಿಲ್ಲದ, ನಿಷ್ಕಲ್ಮಶ ಮನಸ್ಸುಗಳ ಸಾಕ್ಷಾತ್ ದೇವರ ಸ್ವರೂಪದ ಮಕ್ಕಳನ್ನು ಕಾಣಬಹುದು., ಶಿಕ್ಷಕರು ಸಾಕ್ಷಾತ್ ದೇವರ ಸ್ವರೂಪವಾಗಿದ್ದು, ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಮಕ್ಕಳಿಗೆ ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪಾಲಕರು, ಶಿಕ್ಷಕರು ಪ್ರೋತ್ಸಾಹಿಸಿ ಮಕ್ಕಳ ಭವಿಷ್ಯಕ್ಕೆ ಸಹಕರಿಸಬೇಕು. ಬಿ.ಡಿ. ಹರ್ತಿ ನಿವೃತ್ತರಾದ ತಕ್ಷಣ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಗ್ರಾಮೀಣ ಮಟ್ಟದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲೆಂದು ಶ್ರಮಿಸುತ್ತಿರುವ ಬ್ರೈಟ್ ಹಾರಿಜನ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಕೆ.ಎಚ್. ಬೇಲೂರ ಮಾತನಾಡಿ, ಮಕ್ಕಳು ಪೋಷಕರನ್ನು ನೋಡಿ ಸಾಕಷ್ಟು ಕಲಿಯುತ್ತಾರೆ. ಅದರ ಬಗ್ಗೆ ನಮನವಿಟ್ಟು ಪಾಲಕರು ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಲ್ಲಿ ಉತ್ತಮ ಶಿಕ್ಷಣವಂತರಾಗಲು ಸಾಧ್ಯವಾಗುತ್ತದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿನ ಶಿಕ್ಷಣವನ್ನು ಸರಿಯಾಗಿ ಪಡೆದುಕೊಂಡಲ್ಲಿ ಭವಿಷ್ಯದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದರು.
ಅಧ್ಯಕ್ಷತೆಯನ್ನು ಬಿ.ಎಂ. ಪಾಟೀಲ ವಹಿಸಿದ್ದರು. ಬಿಇಓ ವಿ.ವಿ. ನಡುವಿನಮನಿ, ಐ.ಬಿ. ಬೆನಕೊಪ್ಪ, ಬಿ.ಡಿ. ಹರ್ತಿ, ತೇಜಸ್ವಿನಿ ಹಟ್ಟಿ, ಎಚ್.ಎನ್. ಗದಗ, ವಾಯ್.ಎನ್. ಭರಮಗೌಡರ, ಎಸ್.ಎನ್. ಗದಗ, ಎಂ.ಎನ್. ದೇಸಾಯಿ, ಶ್ರೇಯಾ ಮಲ್ಲೂರ, ವೈಷ್ಣವಿ ರಾಠೋಡ, ಗಣೇಶ ಕೆಂಚಣ್ಣವರ, ಹರ್ಷಿತಾ ಅಕ್ಕಮ್ಮನವರ ಮುಂತಾದವರಿದ್ದರು.
ಗದಗ ಗ್ರಾಮೀಣ ಸಿಪಿಐ ಶಿದ್ದರಾಮೇಶ್ವರ ಗಡೇದ ಮಾತನಾಡಿ, ನಮ್ಮ ಕಾಲದಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಕೂಲಿ-ನಾಲಿ ಮಾಡಿ ನಮ್ಮನ್ನು ಕಲಿಸಿದ ತಂದೆ-ತಾಯಿಗಳು, ಪ್ರೀತಿಯಿಂದ ಅಕ್ಷರಾಭ್ಯಾಸ ಮಾಡಿಸಿದ ಗುರುಗಳನ್ನು ನಾವು ಎಂದೂ ಮರೆಯಬಾರದು. ಇಂದು ಮಕ್ಕಳಿಗೆ ಪೋಷಕರು ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು, ಮಕ್ಕಳಿಗೆ ಕಷ್ಟದ ಅರಿವು ಮೂಡಿಸಬೇಕು. ಮಕ್ಕಳು ಗುರುಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಗೌರವ, ಪ್ರೀತಿಯಿಂದ ಕಾಣಬೇಕು ಎಂದರು.



