ರೋಣ ನಗರದಲ್ಲಿ ಶೈಕ್ಷಣಿಕ ಕ್ರಾಂತಿ: ಜಿ.ಎಸ್. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ರೋಣ ಪಟ್ಟಣದಲ್ಲಿ ಶೈಕ್ಷಣಿಕ ಕ್ರಾಂತಿ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಶೀಘ್ರದಲ್ಲಿಯೇ 37 ಕೋಟಿ ರೂ ವೆಚ್ಚದಲ್ಲಿ ವಸತಿ ನಿಲಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.

Advertisement

ಅವರು ಪಟ್ಟಣದ ಮುದೇನಗುಡಿ ರಸ್ತೆಗೆ ಹೊಂದಿಕೊಂಡಿರುವ ಜನ್ನತ್ ನಗರದಲ್ಲಿ ಜರುಗಿದ ಹಜರತ್ ಮುಹಮ್ಮದ್ ಪೈಗಂಬರರ ಜನ್ಮ ದಿನಚಾರಣೆ ಮತ್ತು ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

ರೋಣ ತಾಲೂಕು ಸೇರಿದಂತೆ ಮತಕ್ಷೇತ್ರದಲ್ಲಿನ ಅಲ್ಪಸಂಖ್ಯಾತರ ಕಾಲೋನಿಗಳ ಹಾಗೂ ಶಾದಿಮಹಲ್ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಜನ್ನತ್ ನಗರದ ಅಭಿವೃದ್ಧಿಗಾಗಿ 50 ಲಕ್ಷ ರೂ ಅನುದಾನ ಒದಗಿಸಲಾಗಿದ್ದು, ಪಟ್ಟಣದ ಎರಡು ಖಬರಸ್ಥಾನಗಳ ಅಭಿವೃದ್ಧಿಗೆ ತಲಾ 10 ಲಕ್ಷ ರೂಗಳನ್ನು ಒದಗಿಸಲಾಗಿದೆ. ಅಂಜುಮನ್ ಶಾಲೆಯ ಅಭಿವೃದ್ಧಿಗೂ 10 ಲಕ್ಷ ರೂಗಳನ್ನು ನಿಡಲಾಗಿದೆ ಎಂದರು.

ಸರಕಾರದ ಉದ್ದೇಶ ಅಲ್ಪಸಂಖ್ಯಾತರೆಲ್ಲರೂ ಆರ್ಥಿಕ, ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗಬೇಕು ಎನ್ನುವುದಾಗಿದೆ. ಈ ದೃಷ್ಟಿಯಿಂದ ರೋಣ ಪಟ್ಟಣದಲ್ಲಿ ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕಾಗಿ ಮೂರು ವಸತಿ ನಿಲಯಗಳನ್ನು ತರಲಾಗಿದ್ದು, ಈಗಾಗಲೇ ಒಂದು ವಸತಿ ನಿಲಯ ಆರಂಭಗೊಂಡಿದೆ ಎಂದರು.

ಪಟ್ಟಣದ ಬದಾಮಿ ರಸ್ತೆಗೆ ಹೊಂದಿಕೊಂಡು 50 ಕೋಟಿ ರೂ ವೆಚ್ಚದಲ್ಲಿ ಜೆಟಿಟಿಸಿ ಮಹಾವಿದ್ಯಾಲಯ ಆರಂಭಗೊಂಡಿದೆ. ಮುಸ್ಲಿಂ ಸಮಾಜದ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯಬೇಕು. ಇಲ್ಲಿ ವೃತ್ತಿ ಕೌಶಲ್ಯ ಯೋಜನೆ ಕುರಿತು ತರಬೇತಿ ನೀಡಲಾಗುತ್ತದೆ. ಮುಖ್ಯವಾಗಿ ಉದ್ಯೋಗ ದೊರಕುತ್ತದೆ ಇದರಿಂದ ಕುಟುಂಬಗಳು ಆರ್ಥಿಕವಾಗಿ ಬೆಳೆಯುವಲ್ಲಿ ಸಹಕಾರಿಯಾಗಲಿದೆ ಎಂದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ಪೈಗಂಬರರ ತತ್ವಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ. ಅವರ ಆದರ್ಶ ನಮ್ಮ ಜೀವನದಲ್ಲಿ ಅಡಕವಾಗಬೇಕು. ಅವರು ಜಗತ್ತಿನ ಸರ್ವ ಜನಾಂಗಕ್ಕೂ ಸನ್ಮಾರ್ಗವನ್ನು ತೊರಿದ ಮಹಾನ್ ಪ್ರವಾದಿಗಳು. ಹೀಗಾಗಿ ಮುಸ್ಲಿಂ ಬಾಂಧವರು ಪ್ರವಾದಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.

ಡಾ. ವಿಶ್ವನಾಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಎ.ಎಸ್. ಖತೀಬ ವಹಿಸಿದ್ದರು.

ಪುರಸಭೆ ಉಪಾಧ್ಯಕ್ಷ ಹನ್ಮಂತಪ್ಪ ತಳ್ಳಿಕೇರಿ, ಪುರಸಭೆ ಸದಸ್ಯೆ ರಂಗವ್ವ ಭಜಂತ್ರಿ, ಕೆ.ಆಯ್. ಶೇಖ, ಯೂಸುಪ್ ನವಲಗುಂದ, ಶಫೀಕ ಮೂಗನೂರ, ಯೂಸುಪ್ ಇಟಗಿ, ಖಾದಿರಸಾಬ ಸಂಕನೂರ, ವಿ.ಬಿ. ಸೋಮನಕಟ್ಟಿಮಠ, ಶಾಹಿದ್ ಇಟಗಿ, ಕಾಶೀಮಸಾಬ ಸಂಕನೂರ, ಅಸ್ಲಂ ಕೊಪ್ಪಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರೋಣ, ಗಜೇಂದ್ರಗಡ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ಅಲ್ಪಸಂಖ್ಯಾತರ ಸಮುದಾಯ ಭವನ ಹಾಗೂ ಶಾದಿಮಹಲ್ ನಿರ್ಮಾಣಕ್ಕೆ 1 ಕೋಟಿ 50 ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಿದ್ದು, ರೋಣ, ಗಜೇಂದ್ರಗಡ, ನರೇಗಲ್ಲ, ಮಾರನಬಸರಿ ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವ ಶಾದಿಮಹಲ್ ನಿರ್ಮಾಣಕ್ಕೆ ಮತ್ತಷ್ಟು ನೆರವು ಒದಗಿಸಲಾಗಿದೆ.

– ಜಿ.ಎಸ್. ಪಾಟೀಲ.

ಶಾಸಕರು.


Spread the love

LEAVE A REPLY

Please enter your comment!
Please enter your name here