ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಭಿನ್ನ ಕಥಾನಕಗಳಿಗೆ ಪರಿಣಾಮಕಾರಿಯಾಗಿ ದೃಶ್ಯ ರೂಪ ಕೊಡುವ ಮೂಲಕ ಗಮನ ಸೆಳೆದಿರುವ ಸಿದ್ದು ಪೂರ್ಣಚಂದ್ರ. ದಾರಿ ಯಾವುದಯ್ಯಾ ವೈಕುಂಠಕ್ಕೆ, ಬ್ರಹ್ಮಕಮಲ, ತಾರಿಣಿ ಸೇರಿದಂತೆ ಒಂದಷ್ಟು ಭಿನ್ನ ಧಾಟಿಯ ಸಿನಿಮಾಗಳೊಂದಿಗೆ ಪ್ರತಿಭಾನ್ವಿತ ನಿರ್ದೇಶಕರೆಂದು ಗುರುತಿಸಿಕೊಂಡಿದ್ದಾರೆ. ಇದೀಗ `ಈ ಪಾದ ಪುಣ್ಯ ಪಾದ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಇದರ ಮೊದಲ ಪೋಸ್ಟರ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ದೇಶಕ ಸಿದ್ದು ಪೂರ್ಣಚಂದ್ರ ಇಲ್ಲಿ ಆಪ್ತ ಕಥೆಯೊಂದನ್ನು ದೃಶ್ಯಕ್ಕೆ ಒಗ್ಗಿಸಿದ್ದಾರೆ. ಆನೆಕಾಲು ರೋಗಿಯೊಬ್ಬನ ಸುತ್ತ ಚಲಿಸುವ ಕಥೆಯನ್ನೊಳಗೊಂಡಿರುವ ಸಿನಿಮಾ ಇದು. ಸಾಮಾನ್ಯವಾಗಿ ಯಾವುದೇ ಖಾಯಿಲೆ ಕಸಾಲೆಗಳು ಆವರಿಸಿಕೊಂಡಾಗಲೂ, ಅದು ದೈಹಿಕವಾಗಿ ಬಾಧಿಸುವುದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಕೊಲ್ಲುತ್ತದೆ. ಅದೆಂಥಾ ಕಾಯಿಲೆ ಬಂದರೂ ಎದೆಗುಂದದೆ ಎದುರಿಸಬೇಕು, ಎಲ್ಲದಕ್ಕೂ ಸೆಡ್ಡು ಹೊಡೆದು ಬದುಕಬೇಕೆಂಬ ಸ್ಫೂರ್ತಿದಾಯಕ ಆಶಯ ಈ ಸಿನಿಮಾದ ಆತ್ಮವಾಗಿದೆ. ಹಲವು ವರ್ಷಗಳ ಕಾಲ ಅಧ್ಯಯನ ನಡೆಸಿ, ಅದನ್ನು ಕಥೆಯೊಂದರ ಚೌಕಟ್ಟಿಗೆ ಒಗ್ಗಿಸಿ ದೃಶ್ಯ ರೂಪ ನೀಡಿದ್ದಾರೆ.
ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಅನಂತ ಆರ್ಯನ್, ಕಲೆ ಬಸವರಾಜ್ ಆಚಾರ್, ವಸ್ತ್ರಾಲಂಕಾರ ನಾಗರತ್ನ ಕೆ.ಎಚ್, ಶಬ್ದ ವಿನ್ಯಾಸ ಶ್ರೀರಾಮ್, ಕಲರಿಂಗ್ ಗಗನ್ ಆರ್, ಸಂಕಲನ ದೀಪು ಸಿ.ಎಸ್, ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಹೊಣೆ ಸಿದ್ದು ಪೂರ್ಣಚಂದ್ರ ಹೊತ್ತಿದ್ದಾರೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಪಡೆದಿದೆ.
ನೂರಾರು ಸಿನಿಮಾಗಳಿಗೆ ಪ್ರಚಾರಕರ್ತರಾಗಿ ಕಾರ್ಯ ನಿರ್ವಹಿಸಿರುವ ಆಟೋ ನಾಗರಾಜ್ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಆ ವೃತ್ತಿಯ ನಡುವೆಯೇ ಹಲವಾರು ಸಿನಿಮಾ, ಧಾರಾವಾಹಿಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ, ನಟನಾಗಿ ರೂಪುಗೊಂಡಿದ್ದಾರೆ. ರಶ್ಮಿ, ಚೈತ್ರ, ಪ್ರಮೀಳಾ ಸುಬ್ರಹ್ಮಣ್ಯ, ಮನೋಜ್, ಹರೀಶ್ ಕುಂದೂರು, ಬೇಬಿ ರಿದಿ, ಪವಿತ್ರ, ಬಾಲರಾಜ್ ವಾಡಿ, ರೋಹಿಣಿ, ಶಂಕರ್ ಭಟ್, ಪ್ರೀತಿ, ಮೀಸೆ ಮೂರ್ತಿ ಇನ್ನೂ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.