
ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳು ಇಂದು ಸಬಲೀಕರಣಗೊಳ್ಳಬೇಕಾಗಿದ್ದು, ಶಿಕ್ಷಣ ಇಲಾಖೆಯೊಂದಿಗೆ ಸಂಘ-ಸಂಸ್ಥೆಗಳು ಕೈಜೋಡಿಸಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಶ್ರಮಿಸಬೇಕಾಗಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯೇ ನಮ್ಮೆಲ್ಲರ ಗುರಿ ಎಂದು ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಅಶ್ವನಿ ಜಗತಾಪ ಹೇಳಿದರು.
ಅವರು ಬುಧವಾರ ಗದಗ-ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ನಿಂದ ವಿಶೇಷ ಚೇತನ ಮಕ್ಕಳ ಕಲಿಕಾ ಕೇಂದ್ರಕ್ಕೆ ಕುಳಿತುಕೊಳ್ಳುವ ಕುರ್ಚಿಗಳನ್ನು ದೇಣಿಗೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶೇಷ ಚೇತನ ಮಕ್ಕಳು ಎಲ್ಲರಂತೆ ಆಗಬೇಕು. ಅವರಲ್ಲಿರುವ ಸೂಕ್ತ ಪ್ರತಿಭೆಗಳಿಗೆ ಪ್ರೋತ್ಸಾಹ ಅವಶ್ಯವಾಗಿದೆ. ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತವೆ. ಇಂತಹ ಮಕ್ಕಳ ತಾಯಂದಿರು ಎದೆಗುಂದದೆ ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕು ಎಂದರು.
ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ ಕ್ಲಬ್ನ ಮಾಜಿ ಅಧ್ಯಕ್ಷೆ ಅನ್ನಪೂರ್ಣ ವರವಿ ಮಾತನಾಡಿ, ಅಂಗವಿಕಲತೆ ಶಾಪವಲ್ಲ. ಇಂತಹ ಮಕ್ಕಳ ಕಲಿಕೆಗೆ ಸಹಕಾರ ಅವಶ್ಯ. ತಾಯಂದಿರರಿಗೆ ಸ್ಪೂರ್ತಿ ತುಂಬುವ ಕಾರ್ಯ ನಡೆಯಬೇಕಾಗಿದೆ ಎಂದರು.
ಕ್ಲಬ್ನ ಸಿಪಿಸಿಸಿ ಮೀನಾಕ್ಷಿ ಕೊರವನವರ ಮಾತನಾಡಿ, ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವದು ಅದರ ಅಗತ್ಯತೆಗಳನ್ನು ಪೂರೈಸುವ ಕಾರ್ಯವನ್ನು ನಮ್ಮ ಸಂಸ್ಥೆಯು ನಿರ್ವಹಿಸುತ್ತಿದೆ. ಈ ವರ್ಷ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ನಂ. 4ನ್ನು ದತ್ತು ಪಡೆದು ಅಲ್ಲಿಯ ವಿಶೇಷ ಚೇತನ ಮಕ್ಕಳಿಗೆ ಫಿಜೋಥೆರಪಿಗೆ ಬಂದಾಗ ತಾಯಂದಿರಿಗೆ ಕುಳಿತುಕೊಳ್ಳಲು ಸಹಾಯ ಆಗಲೆಂದು ಕ್ಲಬ್ನ ಮಾಜಿ ಅಧ್ಯಕ್ಷೆ ಅನ್ನಪೂರ್ಣ ವರವಿ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ವಿಶೇಷ ಚೇತನ ಮಕ್ಕಳಿಗಾಗಿ ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸಲಾಗುತ್ತಿದ್ದು, ಅದರೊಂದಿಗೆ ಸಂಘ-ಸಂಸ್ಥೆಗಳು ಕೈಜೋಡಿಸುತ್ತಿರುವದಕ್ಕೆ ಅಭಿನಂದಿಸಿದರು.
ವೇದಿಕೆಯ ಮೇಲೆ ಡೈಟ್ನ ಹಿರಿಯ ಉಪನ್ಯಾಸ ಡಿ.ಎಸ್. ಅರವಟಗಿ ಉಪಸ್ಥಿತರಿದ್ದರು. ಕ್ಲಬ್ನ ಬುಲಿಟಿನ್ ಎಡಿಟರ್ ವೀಣಾ ಕಾವೇರಿ ಸ್ವಾಗತಿಸಿದರು. ಕ್ಲಬ್ನ ಮಾಜಿ ಅಧ್ಯಕ್ಷರುಗಳಾದ ಶಾಂತಾ ನಿಂಬಣ್ಣವರ ಪರಿಚಯಿಸಿದರು. ಸುಲೋಚನಾ ಐಹೊಳಿ ನಿರೂಪಿಸಿದರು. ಶಾಂತಾ ಮುಂದಿನಮನಿ ವಂದಿಸಿದರು.
ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ, ಎಸ್.ಆರ್.ಪಿ ಕೇಂದ್ರದ ಮುಖ್ಯಸ್ಥೆ ಇ.ಡಿ. ಹುಗ್ಗೆಣ್ಣವರ, ಸಂಪನ್ಮೂಲ ವ್ಯಕ್ತಿಗಳಾದ ಕವಿತಾ ಬೇಲೇರಿ, ಶಶಿಧರ ಚಳಗೇರಿ ಸೇರಿದಂತೆ ಎಲ್ಲ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.
ಅತಿಥಿಗಳಾಗಿ ಆಗಮಿಸಿದ್ದ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟೆಪ್ಪನವರ ಮಾತನಾಡಿ, ಇನ್ನರ್ವ್ಹೀಲ್ ಕ್ಲಬ್ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬೆಂಬಲ ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿದೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮಕ್ಕಳ ಕಲಿಕೆಗೆ ಸಾಮಗ್ರಿಗಳನ್ನು ಪೂರೈಸಿ ಪ್ರೇರಣೆ ನೀಡುತ್ತಿದೆ ಎಂದರು.