ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಕೋಳಿ ಮೊಟ್ಟೆ ಶಾರ್ಟೇಜ್ ಎದುರಾಗಿದ್ದು, ದರದಲ್ಲೂ ಭಾರೀ ಏರಿಕೆಯಾಗಿದೆ.
ದಿನದಿಂದ ದಿನಕ್ಕೆ ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ಸಾಲಿಗೆ ಇದೀಗ ಕೋಳಿ ಮೊಟ್ಟೆಯೂ ಸೇರಿದ್ದು, ಬೆಂಗಳೂರಲ್ಲಿ ಕೋಳಿ ಮೊಟ್ಟೆ ಶಾರ್ಟೇಜ್ ಎದುರಾಗಿದೆ. ಚಳಿಗಾಲದಲ್ಲಿ ಮೊಟ್ಟೆ ಐಟಮ್‌ಗಳನ್ನು ಹೆಚ್ಚಿನ ಜನ ಸವಿಯುತ್ತಾರೆ. ಜೊತೆಗೆ ಕ್ರಿಸ್ಮಸ್, ಹೊಸವರ್ಷದ ಹಬ್ಬವಿರೋದ್ರಿಂದ ಕೇಕ್ ಉತ್ಪಾದನೆಗಾಗಿ ಹೆಚ್ಚಾಗಿ ಮೊಟ್ಟೆ ಬಳಸಲಾಗುತ್ತಿದೆ. ಜೊತೆಗೆ ಕಳೆದ ವರ್ಷ ಬರ್ಡ್ ಫ್ಲೂ ಬಂದಿದ್ದರಿಂದ ಹೆಚ್ಚಾಗಿ ಕೋಳಿಗಳ ಸಾಕಾಣಿಕೆಯಾಗಿಲ್ಲ. ಈ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಲ್ಲಿ ಬೇಡಿಕೆಗೆ ತಕ್ಕಂತೆ ಮೊಟ್ಟೆಗಳ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮೊಟ್ಟೆಗಳ ಕೊರತೆ ಉಂಟಾಗಿದೆ.
ಒಂದು ಅಂದಾಜಿನಂತೆ ಪ್ರತಿನಿತ್ಯ ಬೆಂಗಳೂರಲ್ಲಿ ಸದ್ಯ 1 ಕೋಟಿ 10 ಲಕ್ಷ ಮೊಟ್ಟೆಗಳು ಬೇಕು. ಆದ್ರೆ 30-40 ಲಕ್ಷ ಮೊಟ್ಟೆಗಳು ಶಾರ್ಟೇಜ್ ಆಗುತ್ತಿವೆ. ಇನ್ನೂ 5 ರೂ. ಇದ್ದ ಮೊಟ್ಟೆ ಬೆಲೆ ಇದೀಗ ದುಬಾರಿಯಾಗಿದ್ದು, ಒಂದು ಮೊಟ್ಟೆ ಬೆಲೆ 7-8 ರೂ. ಇದೆ. ಪ್ರಮುಖವಾಗಿ ತಮಿಳುನಾಡಿನ ನಾಮಕಲ್‌ನಿಂದ ಪ್ರತಿನಿತ್ಯ 79 ಲಕ್ಷ ಮೊಟ್ಟೆ ರಪ್ತು ಆಗುತ್ತಿದೆ. ಹೀಗಾಗಿ ಕರ್ನಾಟಕಕ್ಕೆ ಮೊಟ್ಟೆ ಪೂರೈಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಜೊತೆಗೆ ಕೋಳಿ ಬೆಲೆಯೂ ಹೆಚ್ಚಾಗಿದ್ದು, ಬಾಯ್ಲರ್ ಕೋಳಿ ಕೆ.ಜಿಗೆ 150 ರೂ. ಹಾಗೂ ಫಾರಂ ಕೋಳಿ ಕೆ.ಜಿಗೆ 170 ರೂ.ಗೆ ಏರಿಕೆಯಾಗಿದೆ ಎನ್ನಲಾಗಿದೆ.


