ಹಾಸನ: ಹಾಸನದಲ್ಲಿ ಖಾಸಗಿ ಫೈನಾನ್ಸ್ ಅಮಾನವೀಯ ಕೃತ್ಯದಿಂದ ವೃದ್ಧ ದಂಪತಿ ಬೀದಿಪಾಲಾಗಿದ್ದಾರೆ.
ಎಸ್, ರಾಜ್ಯದಲ್ಲಿ ಖಾಸಗಿ ಫೈನಾನ್ಸ್ಗಳ ಹಾವಳಿ ಮಿತಿ ಮೀರುತ್ತಿರುವ ನಡುವೆ, ಸಾಲ ಕಟ್ಟಿಲ್ಲ ಎಂಬ ಕಾರಣಕ್ಕೆ ವೃದ್ಧ ದಂಪತಿಯನ್ನು ಮನೆಗೆ ಬೀಗ ಜಡಿದು ಬೀದಿಗೆ ತಳ್ಳಿದ ಅಮಾನವೀಯ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ನಡೆದಿದೆ.
ಮಗನ ಕ್ಯಾನ್ಸರ್ ಚಿಕಿತ್ಸೆಗೆಂದು 2023ರಲ್ಲಿ ಮನೆ ಅಡಮಾನ ಇಟ್ಟು 2 ಲಕ್ಷ ರೂ. ಸಾಲ ಪಡೆದಿದ್ದ ಸಣ್ಣಯ್ಯ (80) ಮತ್ತು ಜಯಮ್ಮ (75) ಒಂದು ವರ್ಷ ಕಂತು ಕಟ್ಟಿದ್ದರೂ, ಕೋರ್ಟ್ ಆದೇಶವಿದೆ ಎಂದು ಹೇಳಿ ಮನೆ ಹಾಗೂ ಕೊಟ್ಟಿಗೆಗೂ ಬೀಗ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಒಂದು ವಾರದಿಂದ ಮನೆಯ ಹೊರಗೆ ವಾಸ ಮಾಡ್ತಿರೋ ದಂಪತಿ, ನಾವು ಸಾಲ ಕಟ್ಟುತ್ತೇವೆ ಸಮಯ ಕೊಡಿ ಎಂದು ಕೈ ಮುಗಿದು ಅಂಗಲಾಚುತ್ತಿದ್ದಾರೆ. ಜೊತೆಗೆ ಸಾಲ ತೀರಿಸಲು ತಮಗೆ ಯಾರಾದರೂ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.



