ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದ ದುರ್ಘಟನೆ ಗ್ರಾಮ ಪಂಚಾಯಿತಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವನ್ನು ಮತ್ತೆ ಬಯಲು ಮಾಡಿದೆ. ಅರೆಬರೆ ಕಾಮಗಾರಿ ಮಾಡಿದ್ದ ಚರಂಡಿಯಲ್ಲಿ ಬಿದ್ದು 60 ವರ್ಷದ ಗಂಗಮ್ಮ ಆರೋಲಿ ಸಾವನ್ನಪ್ಪಿದ್ದಾರೆ.
ಘಟನೆ ಗ್ರಾಮದ ಚರ್ಚ್ ಮುಂಭಾಗದಲ್ಲಿ ನಡೆದಿದೆ. ಚರಂಡಿ ಕಾಮಗಾರಿಯ ವೇಳೆ ಹಲವೆಡೆ ಗುಂಡಿಗಳನ್ನು ಮುಚ್ಚದೇ ಬಿಟ್ಟಿರುವುದು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಈ ದುರಂತಕ್ಕೆ ನೇರ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೂರು ತಿಂಗಳಿಗೂ ಹೆಚ್ಚು ಸಮಯ ಕಳೆದರೂ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸದೆ, ಅಪೂರ್ಣ ಸ್ಥಿತಿಯಲ್ಲೇ ಬಿಟ್ಟಿರುವುದು ಸಾರ್ವಜನಿಕರ ಜೀವಕ್ಕೆ ಅಪಾಯವಾಗುವಂತೆ ಮಾಡಿದೆ. ಈ ಕುರಿತು ಹಲವು ಬಾರಿ ಗುತ್ತಿಗೆದಾರರಿಗೆ ತಿಳಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ಘಟನೆ ಬಳಿಕ ಕುರ್ಡಿ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ನಿರ್ಲಕ್ಷ್ಯದಿಂದ ಸಂಭವಿಸಿದ ಈ ಸಾವು ಗ್ರಾಮದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.



