ಧಾರವಾಡ:- 2016ರಲ್ಲಿ ನಡೆದಿದ್ದ ಕಸ ಹಾಕುವ ವಿಚಾರಕ್ಕೆ ವೃದ್ಧೆ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಐವರು ಹಂತಕರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ದಂಡ ವಿಧಿಸಿ ಧಾರವಾಡದ 4ನೇ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಘಟನೆ ಸಂಬಂಧ 2016ರಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪರಾಧಿಗಳಾದ ಮಂಜುನಾಥ ಕದಂ, ಬಸವರಾಜ ಕದಂ, ಯಲ್ಲಪ್ಪ ಕದಂ, ಲಲಿತಾ ಕದಂ, ಕಮಲಾ ಕದಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2016ರಲ್ಲಿ ಧಾರವಾಡದ ಹಾವೇರಪೇಟಿ ಕುರುಬರ ಓಣಿಯಲ್ಲಿ ವೃದ್ಧೆ ಗಂಗಮ್ಮ ಕದಂರನ್ನು ಅಪರಾಧಿಗಳು ಕೊಂದಿದ್ದರು. ಮನೆ ಹಿಂದೆ ಕಸ ಹಾಕುವ ವಿಚಾರಕ್ಕೆ ಜಗಳ ನಡೆದು ಬಳಿಕ ಕೊಡಲಿಯಿಂದ ಕೊಚ್ಚಿ, ಕಟ್ಟಿಗೆಯಿಂದ ಹೊಡೆದು ಕೊಂದಿದ್ದರು.
ಇದೀಗ ಪ್ರಕರಣ ಸಂಬಂಧ ಸುದೀರ್ಘ ತನಿಖೆ ನಡೆಸಿದ ನ್ಯಾಯಾಲಯವು, ಬರೋಬ್ಬರಿ 8 ವರ್ಷಗಳು ಕಳೆದ ಬಳಿಕ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.



