ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮಾಜಕ್ಕೆ ಹಿರಿಯರ ಮಾರ್ಗದರ್ಶನ, ಸಹಕಾರ ಅವಶ್ಯವಾಗಿದೆ. ಅವರ ಅನುಭವದ ಮಾತುಗಳು ನಮಗೆಲ್ಲ ಪ್ರೇರಣೆ ನೀಡುತ್ತವೆ. ಅದಕ್ಕಾಗಿ ಹಿರಿಯನ್ನು ಸದಾ ಗೌರವದಿಂದ ಕಾಣಬೇಕು. ಇದು ನಮ್ಮನ್ನು ಸದಾ ಕಾಲ ರಕ್ಷಿಸುತ್ತದೆ ಎಂದು ಕ್ರೈಂ ವಿಭಾಗದ ನಿವೃತ್ತ ಪಿಎಸ್‌ಐ ಪ್ರೇಮಕ್ಕ ಬಡಿಗೇರ ಹೇಳಿದರು.
ಅವರು ಪಟ್ಟಣದ ಜಿ.ಎಫ್. ಉಪನಾಳ ಪ್ರತಿಷ್ಠಾನದ ಶಾಂತಿಧಾಮ ವೃದ್ಧಾಶ್ರಮದಲ್ಲಿ ಉಗ್ರಾಣ ನಿಗಮದ ನಿವೃತ್ತ ವ್ಯವಸ್ಥಾಪಕ ಬಸಪ್ಪ ಬಡಿಗೇರ ಅವರ ೭೫ನೇ ವರ್ಷದ ಜನ್ಮದಿನದಂದು ಇಲ್ಲಿನ ವೃದ್ಧರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮನೆಯಲ್ಲಿ ಹಿರಿಯರು ನೀಡುವ ಸಲಹೆ-ಸೂಚನೆಗಳು ಮೌಲ್ಯಯುತವಾಗಿರುತ್ತವೆ. ಬಸಪ್ಪ ಬಡಿಗೇರ ಅವರ ಜನ್ಮದದಿನೋತ್ಸವವನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಬಸಪ್ಪ ಬಡಿಗೇರ ಮಾತನಾಡಿ, ನನ್ನ ತಂದೆ-ತಾಯಿಯರನ್ನು ಚಿಕ್ಕ ವಯಸ್ಸಿನಲ್ಲಿ ಕಳೆದುಕೊಂಡ ನನಗೆ ವೃದ್ಧಾಶ್ರಮದ ಹಿರಿಯರು ಅಥವಾ ನನ್ನ ಸಮಕಾಲೀನರನ್ನು ಗೌರವಿಸುವ ಸೌಭಾಗ್ಯ ದೊರೆತಿರುವದು ನನ್ನ ಪುಣ್ಯವಾಗಿದೆ. ಶಾಂತಿಧಾಮ ವೃದ್ಧಾಶ್ರಮ ನಿಜಕ್ಕೂ ಉತ್ತಮ ಕಾರ್ಯ ಮಾಡುತ್ತಿದ್ದು, ನೊಂದ ಜೀವಿಗಳ ಪಾಲಿಗೆ ಆಶಾಕಿರಣವಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಉಪಾಧ್ಯಕ್ಷ ದಿಗಂಬರ ಪೂಜಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೀರಣ್ಣ ಬಡಿಗೇರ, ರಾಜೇಶ ಬಡಿಗೇರ, ಮೌನೇಶ ಬಡಿಗೇರ, ವಿರೇಶ ಬಡಿಗೇರ, ಸೋಮಪ್ಪ ಬಡಿಗೇರ, ಗಂಗಾಧರ ಬಾಲೇಹೊಸೂರು ಸೇರಿದಂತೆ ಶಿಕ್ಷಕರು, ಅಭಿಮಾನಿಗಳು ಹಾಜರಿದ್ದರು. ವೃದ್ಧಾಶ್ರಮದ ಮೇಲ್ವಿಚಾರಕಿ ಸುನೀತಾ ಜಿ.ನಿರೂಪಿಸಿದರು.