ವಿಜಯಸಾಕ್ಷಿ ಸುದ್ದಿ, ಹಾವೇರಿ : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಮುದಾಯಗಳ ನಡುವಿನ ಸಾಮರಸ್ಯ ಕೆಡಿಸುವ ಕೆಲಸ ಮಾಡಲಾಗುತ್ತಿದೆ. ಪೊಲೀಸ್ ಠಾಣೆಗಳ ಮೂಲಕ ಆಡಳಿತ ನಡೆಸಲಾಗುತ್ತಿದೆ. ನಾನು ಕಳೆದ ಹದಿನೈದು ವರ್ಷಗಳಿಂದ ಈ ಕ್ಷೇತ್ರದಲ್ಲಿ ಯಾವುದೇ ಕೋಮು ಸಂಘರ್ಷ ಉಂಟಾಗದಂತೆ ನೋಡಿಕೊಂಡಿದ್ದೇನೆ. ಊರಿನ ಸಮಸ್ಯೆಗಳನ್ನು ಊರಲ್ಲಿಯೇ ಬಗೆಹರಿಸುವ ಕೆಲಸ ಮಾಡಿದ್ದೇನೆ. ಶಿಗ್ಗಾವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳ ನಡುವೆ ಸಾಮರಸ್ಯ ಮುಂದುವರೆಯಲು ಭರತ್ ಬೊಮ್ಮಾಯಿ ಗೆಲ್ಲಬೇಕು. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಬೆಂಬಲ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರ ಶಿಗ್ಗಾವಿ ತಾಲೂಕಿನ ಹುರುಳಿಕುಪ್ಪೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಮುದಾಯಗಳ ನಡುವೆ ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು,
ನಾನು ವಿಧಾನ ಪರಿಷತ್ ಸದಸ್ಯನಿದ್ದಾಗಿನಿಂದ ಹುರುಳಿಕುಪ್ಪೆ ಗ್ರಾಮದೊಂದಿಗೆ ಸಂಪರ್ಕ ಇದೆ. ಈ ಊರಲ್ಲಿ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಇದ್ದಾರೆ. ಬೀರಲಿಂಗೇಶ್ವರ ಸಮುದಾಯ ಭವನವನ್ನು ಸಂಪೂರ್ಣ ಮಾಡಿಕೊಡುವ ಜವಾಬ್ದಾರಿ ನನ್ನದು. ಎಸ್ಸಿ, ಎಸ್ಟಿ, ಹಾಗೂ ಭೋವಿ ಸಮುದಾಯದ ಬೇಡಿಕೆ ಇದೆ ಅದೆಲ್ಲವನ್ನು ಮಾಡುತ್ತೇನೆ ಎಂದರು.
ಈ ಕ್ಷೇತ್ರದ ಸಿಎಂ ಆಗಿ ಕೆಲಸ ಮಾಡುವ ಸೌಭಾಗ್ಯ ನೀವು ಕೊಟ್ಟಿದ್ದೀರಿ, ನಾನು ಸಿಎಂ ಆಗಿ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಮಾಡಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಜಮೀನು ಅಷ್ಟೆ ಇದೆ. ಹೀಗಾಗಿ ಕೃಷಿ ಮೇಲಿನ ಅವಲಂಬನೆ ಕಡಿಮೆ ಮಾಡಲು ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆದು ಬೇರೆ ಉದ್ಯೋಗ ಮಾಡಲು ಅನುಕೂಲವಾಗಲು ವಿದ್ಯಾನಿಧಿ ಯೋಜನೆ ಮಾಡಿದೆ. ಪ್ರವಾಹ ಬಂದಾಗ ಎರಡು ಪಟ್ಟು ಪರಿಹಾರ ನೀಡಿದ್ದೇವು.
ಆದರೆ, ಈಗಿನ ಸರ್ಕಾರ ಬರಪರಿಹಾರ ಪ್ರವಾಹ ಪರಿಹಾರ ನೀಡುತ್ತಿಲ್ಲ. ಸರ್ಕಾರ ಜನರ ಪರ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
ಭರತ್ ಬೊಮ್ಮಾಯಿಗೆ ಪಕ್ಷದ ನಾಯಕರು ಟಿಕೆಟ್ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಅಭಿವೃದ್ದಿ ಮುಂದುವರೆಯಬೇಕು. ಅದಕ್ಕಾಗಿ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.