ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್ ಬ್ಯಾಂಕ್) ಆಡಳಿತ ಮಂಡಳಿಯ ಚುನಾವಣೆ ಡಿ. 15ರಂದು ನಡೆಯಲಿದ್ದು, ಈ ಚುನಾವಣೆಯಲ್ಲಿ ಬಿನ್ ಸಾಲಗಾರರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗುಡ್ಡಪ್ಪ ಶಿವಪ್ಪ ಮತ್ತೂರು ಅವರು ಕಣದಿಂದ ಹಿಂದೆ ಸರಿದು ಇನ್ನೊರ್ವ ಅಭ್ಯರ್ಥಿ ವಿನೋದರೆಡ್ಡಿ ಗೋವಿಂದರೆಡ್ಡಿ ಅಳವಂಡಿಯವರಿಗೆ ಗುರುವಾರ ಬೆಂಬಲ ಸೂಚಿಸಿದರು.
ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ, ಕಣದಿಂದ ಹಿಂದೆ ಸರಿಯುವ ಘೋಷಣೆ ಮಾಡಿದ ಅಭ್ಯರ್ಥಿ ಗುಡ್ಡಪ್ಪ ಶಿವಪ್ಪ ಮತ್ತೂರ, ಪಿಕಾರ್ಡ ಬ್ಯಾಂಕ್ ಬಿನ್ ಸಾಲಗಾರರ ಕ್ಷೇತ್ರದಿಂದ ನಾನು ಸಹ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಕ್ಷೇತ್ರದ ಮತದಾರರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ನನಗೆ ಆರೋಗ್ಯ ಸಮಸ್ಯೆಯಿರುವ ಹಿನ್ನೆಲೆಯಲ್ಲಿ ನಾನು ಕಣದಿಂದ ಹಿಂದೆ ಸರಿಯಲು ನಿರ್ಧರಿಸಿ ಕಣದಲ್ಲಿರುವ ವಿನೋದರೆಡ್ಡಿ ಅಳವಂಡಿಯವರಿಗೆ ಬೆಂಬಲ ಸೂಚಿಸುತ್ತಿದ್ದೇನೆ. ಇದು ನನ್ನ ಸ್ವಯಂ ನಿರ್ಧಾರವಾಗಿದೆ. ಕ್ಷೇತ್ರದ ಮತದಾರರು ವಿನೋದರೆಡ್ಡಿ ಅಳವಂಡಿಯವರಿಗೆ ಮತದಾನ ಮಾಡಿ ಆಯ್ಕೆ ಮಾಡಬೇಕೆಂದು ವಿನಂತಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿನ್ ಸಾಲಗಾರರ ಅಭ್ಯರ್ಥಿ ವಿನೋದರೆಡ್ಡಿ ಅಳವಂಡಿ ಕಣದಿಂದ ಹಿಂದೆ ಸರಿದು ಬೆಂಬಲ ಸೂಚಿಸಿದ ಗುಡ್ಡಪ್ಪ ಮತ್ತೂರ ಅವರನ್ನು ಅಭಿನಂದಿಸಿ ಎಲ್ಲರೂ ಸೇರಿ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲ್ಲಿ ಮುಖಂಡರಾದ ಪದ್ಮರಾಜ ಪಾಟೀಲ್, ಅಮರೀಶ ತೆಂಬದಮನಿ, ಗಂಗಾಧರ ಮ್ಯಾಗೇರಿ, ಮುಕ್ತಾರಅಹ್ಮದ ಗದಗ, ಕಿರಣ ನವಲೆ, ಗಾಳೆಪ್ಪ ಹರಿಜನ, ಗುಡ್ಡಪ್ಪ ಹಡಪದ, ಗುರುರಾಜ ಬಾಗಲದ, ಹನುಮಂತಪ್ಪ ಹರಿಜನ, ಮುದಕಣ್ಣ ಗದ್ದಿ ಮುಂತಾದವರಿದ್ದರು.