ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಸುಭಾಸ ಮ್ಯಾಗೇರಿ ಅಧ್ಯಕ್ಷರಾಗಿ, ಕಾಂಗ್ರೆಸ್‌ನ ಸವಿತಾ ಬಿದರಳ್ಳಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಚುನಾವಣೆ ರಣತಂತ್ರ ಹೆಣೆಯುವಲ್ಲಿ ಮುಂದಾಗಿದ್ದರು. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬಂಡಾಯ ಸದಸ್ಯ ಸುಭಾಸ ಮ್ಯಾಗೇರಿ ಹಾಗೂ ಯಮನಪ್ಪ ತಿರಕೋಜಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ಬಿದರಳ್ಳಿ, ಸುಜಾತಾಬಾಯಿ ಶಿಂಗ್ರಿ ಚುನಾವಣಾಧಿಕಾರಿ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿತ್ತು.
ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ನಾಮಪತ್ರ ಹಿಂಪಡೆಯದ್ದರಿಂದ ಮಧ್ಯಾಹ್ನ 2.30ಕ್ಕೆ ನಡೆದ ಚುನಾವಣೆಯಲ್ಲಿ ಪುರಸಭೆ ಅಧ್ಯಕ್ಷರಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಸುಭಾಸ ಮ್ಯಾಗೇರಿ-13 ಮತಗಳು, ಉಪಾಧ್ಯಕ್ಷರಾಗಿ ಸವಿತಾ ಬಿದರಳ್ಳಿ-13 ಮತಗಳನ್ನು ಪಡೆದರು.
ಪ್ರತಿಸ್ಪರ್ಧಿಗಳಾದ ಯಮನಪ್ಪ ತಿರಕೋಜಿ ಹಾಗೂ ಸುಜಾತಾಬಾಯಿ ಶಿಂಗ್ರಿ ತಲಾ 11 ಮತಗಳನ್ನು ಪಡೆದರು. ಬಂಡಾಯದಿಂದ ಪುರಸಭೆ ಅಧಿಕಾರ ಕಾಂಗ್ರೆಸ್ ಪಾಲಾಯಿತು.
ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸಿದ್ದಪ್ಪ ಬಂಡಿ ತಂತ್ರಗಾರಿಕೆ ಹಾಗೂ ಮರ್ತುಜಾ ಡಾಲಾಯತ್ ತಂಡದ ಸಮಯಪ್ರಜ್ಞೆಯಿಂದ ಪುರಸಭೆ ಆಡಳಿತ ಕಾಂಗ್ರೆಸ್ ಪಾಲಾಗಿದ್ದು, ಕಾಂಗ್ರೆಸ್ ಮುಖಂಡರು ಗೆಲುವಿನ ನಗೆ ಬೀರಿದರು.
ಪಟ್ಟಣದ ಪುರಸಭೆಯಲ್ಲಿ ಬಹುಮತ ಹೊಂದಿದ ಪರಿಣಾಮ ಬಿಜೆಪಿ ಸಹಜವಾಗಿ ಪುರಸಭೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದರಿಂದ ರಾಜಕೀಯ ಕ್ಷಿಪ್ರ ಬೆಳವಣಿಗೆಯಿಂದ ಈ ಲೆಕ್ಕಾಚಾರ ಸಂಪೂರ್ಣ ವಿಫಲವಾಯಿತು. ಬಿಜೆಪಿ ಸದಸ್ಯರಿಗೆ ಸಭೆ ಮಾಡಿ ವಿಪ್ ಜಾರಿ ಮಾಡಿ ಮಂಗಳವಾರ ಬೆಳಿಗ್ಗೆ 9.30ಕ್ಕೆ ಬಿಜೆಪಿ ಕಾರ್ಯಾಲಯಕ್ಕೆ ಬರುವಂತೆ ಸೂಚಿಸಿತ್ತು. ಆದರೆ ಬಿಜೆಪಿ ಹೈಕಮಾಂಡ್ ಕರೆದಿದ್ದ 18 ಸದಸ್ಯರಲ್ಲಿ 7 ಸದಸ್ಯರು 10.30 ಆದರೂ ಸಭೆಗೆ ಬಾರದಿದ್ದಾಗ, ಬಿಜೆಪಿ ಮುಖಂಡರು ಬಂಡಾಯ ಸದಸ್ಯರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.