ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಇಲ್ಲಿನ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಆದರ್ಶ ಕುಲಕರ್ಣಿ ನರೇಗಲ್ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷ ಈಶ್ವರ ಬೆಟಗೇರಿ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷ ಆದರ್ಶ ಕುಲಕರ್ಣಿ ಮಾತನಾಡಿ, ನನ್ನ ಮೇಲೆ ವಿಶ್ವಾಸವನ್ನಿಟ್ಟು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ಎಲ್ಲ ಪತ್ರಕರ್ತ ಮಿತ್ರರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಿ, ನಾನು ಮತ್ತು ನನ್ನ ತಂಡ ಗದಗ ಜಿಲ್ಲೆಯಲ್ಲಿಯೇ ಇದನ್ನೊಂದು ಮಾದರಿ ಸಂಘವನ್ನಾಗಿ ಮಾಡುತ್ತೇವೆ ಎಂದರು.
ನಿಕಟಪೂರ್ವ ಅಧ್ಯಕ್ಷ ಈಶ್ವರ ಬೆಟಗೇರಿ ಮಾತನಾಡಿ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಮ್ಮ ತಂಡದಿಂದ ಸಾಧ್ಯವಾದಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದೇವೆ. ಆ ಸಮಯದಲ್ಲಿ ಸಹಕಾರ ನೀಡಿದ ತಮಗೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಆದರ್ಶ ಕುಲಕರ್ಣಿಯವರ ಅಧ್ಯಕ್ಷತೆಯಲ್ಲಿ ಈ ಹೊಸ ತಂಡ ಇನ್ನೂ ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಹಾರೈಸುತ್ತೇನೆ ಎಂದರು.
ಸಭೆಯನ್ನುದ್ದೇಶಿಸಿ ಹಿರಿಯ ಪತ್ರಕರ್ತ ಅರುಣ ಕುಲಕರ್ಣಿ, ಹಿಂದಿನ ಅಧ್ಯಕ್ಷರಾದ ಮೈಲಾರಪ್ಪ ಚಳ್ಳಮರದ, ನಿಂಗರಾಜ ಬೇವಿನಕಟ್ಟಿ, ಉಮೇಶ ನವಲಗುಂದ ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಮಲ್ಲಯ್ಯ ಗುಂಡಗೋಪುರಮಠ, ಸಂಗಮೇಶ ಮೆಣಸಿಗಿ, ಗವಿಸಿದ್ದಪ್ಪ ಗೊಡಚಪ್ಪನವರ, ಸಿಕಂದರ ಆರಿ, ಪ್ರಶಾಂತ ಜಕ್ಕಲಿ ಮುಂತಾದವರು ಉಪಸ್ಥಿತರಿದ್ದರು.
ಸಂಘದ ನೂತನ ಗೌರವಾಧ್ಯಕ್ಷರಾಗಿ ಅರುಣ ಬಿ. ಕುಲಕರ್ಣಿ, ಅಧ್ಯಕ್ಷರಾಗಿ ಆದರ್ಶ ಕುಲಕರ್ಣಿ, ಉಪಾಧ್ಯಕ್ಷರಾಗಿ ಮಲ್ಲಯ್ಯ ಗುಂಡಗೋಪುರಮಠ, ಸಂಗಮೇಶ ಮೆಣಸಿಗಿ, ಕಾರ್ಯದರ್ಶಿಯಾಗಿ ಉಮೇಶ ನವಲಗುಂದ, ಸಹ ಕಾರ್ಯದರ್ಶಿಯಾಗಿ ಗವಿಸಿದ್ದಪ್ಪ ಗೊಡಚಪ್ಪನರ, ಖಜಾಂಚಿಯಾಗಿ ನಿಂಗರಾಜ ಬೇವಿನಕಟ್ಟಿ ಆಯ್ಕೆಯಾದರು.