ವಿಜಯಸಾಕ್ಷಿ ಸುದ್ದಿ, ರೋಣ: ರೋಣ ತಾಲೂಕಾ ಪಿಎಲ್‌ಡಿ ಬ್ಯಾಂಕ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು 14 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಶನಿವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆದು ಶಾಸಕ ಜಿ.ಎಸ್. ಪಾಟೀಲರ ಮಾರ್ಗದರ್ಶನದಂತೆ ಈ ಎರಡೂ ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡವು.
ಸತತ ಐದು ಬಾರಿ ನಿಡಗುಂದಿ ಸಾಲಗಾರ ಕ್ಷೇತ್ರದಿಂದ ಗೆದ್ದು ಬರುತ್ತಿರುವ ರಮೇಶ ಪಲ್ಲೇದರವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದರೆ, ಮೊದಲ ಬಾರಿಗೆ ಹೊಳೆಆಲೂರ ಕ್ಷೇತ್ರದಿಂದ ಚುನಾಯಿತರಾದ ಯಚ್ಚರಗೌಡ ಗೋವಿಂದಗೌಡ್ರರವರಿಗೆ ಉಪಾದ್ಯಕ್ಷ ಸ್ಥಾನ ಒಲಿದು ಬಂದಿತು. ಮುಖ್ಯವಾಗಿ ನಿಡಗುಂದಿ ಕ್ಷೇತ್ರಕ್ಕೆ 33 ವರ್ಷಗಳ ನಂತರ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದು, ಈ ಭಾಗದ ಮುಖಂಡರುಗಳ ಆಸೆ ಈಡೇರಿದಂತಾಗಿದೆ.
ನೂತನ ಅಧ್ಯಕ್ಷ ಜಕ್ಕಲಿ ಗ್ರಾಮದ ರಮೇಶ ಪಲ್ಲೇದರವರ ತಂದೆ ಎಸ್.ಎಸ್. ಪಲ್ಲೇದ ಕೂಡ ಸತತ ನಾಲ್ಕು ಬಾರಿ ಸದಸ್ಯರಾಗುವ ಮೂಲಕ 1992ರಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಜಕ್ಕಲಿ ಗ್ರಾಮಕ್ಕೆ ಅಥವಾ ನಿಡಗುಂದಿ ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿರಲಿಲ್ಲ. ಆದರೆ 33 ವರ್ಷಗಳ ನಂತರ ತಂದೆ ಅಲಂಕರಿಸಿದ್ದ ಸ್ಥಾನವನ್ನು ಅಲಂಕರಿಸುವ ಮೂಲಕ ನವ ಚೈತನ್ಯ ಮೂಡಿಸಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಘೋಷಣೆಯಾಗುತ್ತಿದ್ದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.
ಜಿ.ಪಂ ಮಜಿ ಸದಸ್ಯ ಎಸ್.ಎಚ್. ಹಾದಿಮನಿ, ತಾ.ಪಂ ಮಾಜಿ ಸದಸ್ಯರಾದ ಅಂದಪ್ಪ ಬಿಚ್ಚೂರ, ಮಲ್ಲಣ್ಣ ಮೇಟಿ, ಸಂದೇಶ ದೊಡ್ಡಮೇಟಿ, ಮುತ್ತು ಮೇಟಿ, ಪಕ್ಕಿರಪ್ಪ ಕುಕನೂರ, ಬಂದು ಗಡಾದ, ಅಡಿವೇಪ್ಪ ಜಿಗಳೂರ, ಅಲ್ಲಾಸಾಬ ಮೋತೆಖಾನ್, ಡಿ.ಡಿ. ದೋಟಿಹಾಳ, ರಿಯಾಜ ಆಲೂರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.