ಶಿಕ್ಷಕ ಸಮುದಾಯವೇ ತಲೆ ತಗ್ಗಿಸಬೇಕಾದೀತು

0
Election of Teacher Graduate Constituency
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ನಮ್ಮಂತವರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದೇವೆ ಎಂದು ಹೇಳಿಕೊಳ್ಳಲು ಈಗ ನಮಗೂ ನಾಚಿಕೆಯಾಗುತ್ತಿದೆ ಎಂದು 1980ರಿಂದ ಸತತವಾಗಿ ಎಂಟು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆ ಆಗಿರುವ ಸಭಾಪತಿ ಬಸವರಾಜ್ ಹೊರಟ್ಟಿಯವರು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ರಾಜ್ಯದಲ್ಲಿ ಪ್ರತಿ 6 ವರ್ಷಕ್ಕೊಮ್ಮೆ ವಿಧಾನ ಪರಿಷತ್ತು ಸದಸ್ಯತ್ವಕ್ಕಾಗಿ ಶಿಕ್ಷಕರ ಕ್ಷೇತ್ರ ಮತ್ತು ಪದವೀಧರ ಕ್ಷೇತ್ರಕ್ಕೆ ಚುನಾವಣೆಗಳು ನಡೆಯುತ್ತಿದೆ. ಪ್ರಥಮ ಬಾರಿಗೆ 1958ರಲ್ಲಿ ಈ ಕ್ಷೇತ್ರಗಳು ಸ್ಥಾಪನೆ ಆಗಿವೆ. ಕಳೆದ ಒಂದು ದಶಕದ ತನಕ ಇಲ್ಲಿ ಚುನಾವಣೆಗೆ ನಿಲ್ಲುವ ವ್ಯಕ್ತಿಗಳು ಶಿಕ್ಷಕರಾಗಿರುತ್ತಿದ್ದರು ಇಲ್ಲವೇ ಸಾರ್ವಜನಿಕ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ ಗೌರವಾನ್ವಿತ ವ್ಯಕ್ತಿಗಳಾಗಿರುತ್ತಿದ್ದರು. ಅವರುಗಳು ಕೇವಲ ಮತದಾರರನ್ನ ನೋಂದಾಯಿಸಿ ಮನವಿ ಪತ್ರವನ್ನು ನೀಡಿ ತಮ್ಮ ಸೇವೆ ಮತ್ತು ಅನುಭವದ ಆಧಾರದ ಮೇಲೆ ಆದ್ಯತೆಯನ್ನ ನೀಡಬೇಕೆಂದು ಕೋರಿಕೊಳ್ಳುತ್ತಿದ್ದರು. ಮತದಾರರು ಸಹ ಯಾವುದೇ ರೀತಿಯ ಹಣದ ಪ್ರಭಾವವಿಲ್ಲದೆ, ಜಾತಿಯ ಸೋಂಕು ಇಲ್ಲದೆ ಯೋಗ್ಯರನ್ನು ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಈ ಚುನಾವಣೆ ನಾಚಿಕೆ ಬರುವ ರೀತಿಯಲ್ಲಿ ನಡೆಯುತ್ತಿದೆ. ಮತದಾರರು ಅನೇಕ ಸಂದರ್ಭದಲ್ಲಿ ಹಣದ ಪ್ರಭಾವಕ್ಕೆ ಗುರಿಯಾಗುತ್ತಿದ್ದಾರೆ. ಇಲ್ಲವೇ ಕ್ಷಣಿಕ ಅಮಿಷಗಳಿಗೆ ಬಲಿಯಾಗುತ್ತಿದ್ದಾರೆ.

ಪ್ರತಿಯೊಂದು ಮತಕ್ಕೆ 2ರಿಂದ 10 ಸಾವಿರ ರೂ ತನಕ ನಿಗದಿ ಮಾಡುತ್ತಿರುವುದು ಅತ್ಯಂತ ಆತಂಕದ ಸಂಗತಿಯಾಗಿದೆ. ಸಾರ್ವಜನಿಕ ಚುನಾವಣೆಗಳಲ್ಲಿ ಬಡವರು ಹಣವನ್ನು ಬಯಸುತ್ತಾರೆ ಎನ್ನುವ ಮಾತಿದೆ.

ಶಿಕ್ಷಕರು ಮತ್ತು ಪದವೀಧರರು ಬಹಳಷ್ಟು ಮಂದಿ ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೆ ತಮ್ಮ ಮತವನ್ನು ಸರಿಯಾದ ರೀತಿಯಲ್ಲಿ ಯೋಗ್ಯರಿಗೆ ಚಲಾವಣೆಯನ್ನು ಮಾಡುವ ಮನಸ್ಥಿತಿಯವರು ಸಾಕಷ್ಟು ಮಂದಿ ಇದ್ದಾರೆ. ಆದರೂ ದುರ್ಬಲ ಮನಸ್ಸಿನ ಮತದಾರರನ್ನು ಗುರಿಯನ್ನಾಗಿಸಿಕೊಂಡು ಅವರಿಗೆ ಹಣ ಕೊಟ್ಟು ಮತವನ್ನು ಪಡೆಯುವ ತಂತ್ರಗಾರಿಕೆಯನ್ನ ಅನುಸರಿಸುತ್ತಿರುವುದು ಸರಿಯಾದ ಕ್ರಮವಲ್ಲ.

ಒಟ್ಟಾರೆಯಾಗಿ ಒಂದೊಂದು ಮತಕ್ಕೆ ಸಾವಿರಾರು ರೂ ಖರ್ಚು ಮಾಡಿ ಗಳಿಸುವುದಾದರೆ ಕೋಟಿ ಕೋಟಿ ಲೆಕ್ಕದಲ್ಲಿ ಹಣವನ್ನ ಖರ್ಚು ಮಾಡಿ ಗೆಲ್ಲುವವರ ಮುಂದೆ ಮುಂದಿನ ದಿನಗಳಲ್ಲಿ ಪ್ರಜ್ಞಾವಂತರು ಚುನಾವಣೆಗೆ ನಿಲ್ಲುವ ವಿಚಾರದಲ್ಲಿ 10 ಬಾರಿ ಯೋಚಿಸುವಂತಹ ದಿನಗಳು ಬರಬಹುದು. ಒಂದೊಮ್ಮೆ ಶಾಂತವೇರಿ ಗೋಪಾಲಗೌಡರು ಬದುಕಿದ್ದರೆ ಚುನಾವಣೆಯ ಖರ್ಚಿನ ಲೆಕ್ಕವನ್ನು ನೋಡಿ ಅದೆಷ್ಟು ಸಿಟ್ಟಾಗುತ್ತಿದ್ದರು ಎಂದು ಕಲ್ಪಿಸಲೂ ಸಾಧ್ಯವಾಗುತ್ತಿಲ್ಲ ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದಲ್ಲಿನ ಹಣದ ಪ್ರಭಾವವನ್ನ ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಸಭ್ಯರು ಯಾರೂ ಚುನಾವಣೆಗೆ ಬರಲು ಸಾಧ್ಯವೇ ಇಲ್ಲ. ಬಂಡವಾಳಶಾಹಿಗಳು ಮಾತ್ರವೇ ಇಂತಹ ಚುನಾವಣೆಗಳಲ್ಲಿ ಆಯ್ಕೆಯಾಗಲು ಸಾಧ್ಯವಾಗುತ್ತದೆ. ಚುನಾವಣೆಗೆ ನಿಂತ ಅಭ್ಯರ್ಥಿಗಳು ತಾವು ಯಾವ ಕ್ಷೇತ್ರಕ್ಕೆ ನಿಂತಿದ್ದೇವೆ, ಯಾವ ಪ್ರತಿನಿಧಿ ಆಗುತ್ತಿದ್ದೇವೆ ಎನ್ನುವ ಕಲ್ಪನೆಯಾದರೂ ಇರಬೇಕು. ಅದೇ ರೀತಿಯಲ್ಲಿ ಲಕ್ಷಾಂತರ ಮಕ್ಕಳಿಗೆ ಮಾದರಿಯಾಗ ಬೇಕಾಗಿರುವ ಶಿಕ್ಷಕರ ಪೈಕಿ ಕೆಲವರು ಯಾರೋ ಮಾಡುವ ಇಂತಹ ಕೃತ್ಯಗಳಿಗೆ ಇಡೀ ಶಿಕ್ಷಕ ಸಮುದಾಯವೇ ತಲೆ ಬಾಗಿಸಿ ನಿಲ್ಲಬೇಕಾಗುತ್ತದೆ. ಆದುದರಿಂದ, ಶಿಕ್ಷಕ ಬಂಧುಗಳು ಮತ್ತು ಪದವೀಧರ ಬಂಧುಗಳು ತಮ್ಮ ಜವಾಬ್ದಾರಿಯನ್ನು ಅರಿತು, ಆಗುತ್ತಿರುವ ಅನಾಹುತಗಳನ್ನು ತಪ್ಪಿಸಿ ಚುನಾವಣೆ ವಿಚಾರಗಳ ಮೇಲೆ ನಡೆಯಬೇಕು ಮತ್ತು ವ್ಯಕ್ತಿತ್ವಗಳ ಮೇಲೆ ನಿರ್ಧಾರಗಳಾಗಬೇಕು ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here