ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುರಸಭೆಯ ವಾರ್ಡ್ ನಂ. 13ರ ತೆರವಾದ ಸ್ಥಾನಕ್ಕೆ ಉಪಚುನಾವಣೆಯನ್ನು ಜರುಗಿಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಲಕ್ಷ್ಮೇಶ್ವರ ಪುರಸಭೆಯ ವಾರ್ಡ್ ನಂ. 13ರ ಉಪಚುನಾವಣೆಯ ಸದಸ್ಯ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ನವೆಂಬರ್ 4ರಿಂದ 11ರವರೆಗೆ ಸಾರ್ವತ್ರಿಕ ರಜೆಗಳನ್ನು ಹೊರತುಪಡಿಸಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಲಕ್ಷ್ಮೇಶ್ವರ ಪುರಸಭೆ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದಾಗಿದೆ.
ನಾಮಪತ್ರಗಳ ಪರಿಶೀಲನೆಯನ್ನು ನವೆಂಬರ್ 12ರಂದು ಕೈಗೊಳ್ಳಲಾಗುವುದು. ಉಮೇದುವಾರಿಕೆಯನ್ನು ನವೆಂಬರ್ 14ರ ಮಧ್ಯಾಹ್ನ 3 ಗಂಟೆಯೊಳಗೆ ಹಿಂತೆಗೆದುಕೊಳ್ಳಬಹುದಾಗಿದೆ. ಮತದಾನವನ್ನು ನವೆಂಬರ್ 23ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರಗೆ ಜರುಗಿಸಲಾಗುವುದು. ಮತಗಳ ಎಣಿಕೆಯನ್ನು ನವೆಂಬರ್ 26ರ ಬೆಳಿಗ್ಗೆ 8 ಗಂಟೆಯಿಂದ ತಹಸೀಲ್ದಾರ ಕಾರ್ಯಾಲಯ, ಲಕ್ಷ್ಮೇಶ್ವರದಲ್ಲಿ ಕೈಗೊಳ್ಳಲಾಗುವುದು.
ಚುನಾವಣಾ ಪ್ರಕ್ರಿಯೆಯು ನವೆಂಬರ್ 26ಕ್ಕೆ ಮುಕ್ತಾಯವಾಗುತ್ತದೆ. ಚುನಾವಣೆ ನಡೆಯುವ ನಗರ, ಸ್ಥಳೀಯ ಸಂಸ್ಥೆಗಳ ವಾರ್ಡ್ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ನವೆಂಬರ್ 4ರಿಂದ 26ರವರೆಗೆ (ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ) ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.