ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹೆಸ್ಕಾಂ ವತಿಯಿಂದ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ. 2023ರಲ್ಲಿ ಹೊಸ ಟಿ.ಸಿಗಾಗಿ 10 ಸಾವಿರ ರೂಪಾಯಿಗಳನ್ನು ಭರ್ತಿ ಮಾಡಿ ನೋಂದಣಿ ಮಾಡಿಸಿಕೊಂಡ 7 ಜಿಲ್ಲೆಗಳ 15,200 ರೈತರಿಗೆ ಟಿ.ಸಿ ಪೂರೈಸಿದ್ದೇವೆ ಎಂದು ಹೆಸ್ಕಾಂ ನಿಗಮದ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಹೇಳಿದರು.
ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ವಿದ್ಯುತ್ ಪರಿವರ್ತಕ ಸಾಗಿಸುವ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
200 ಕೋಟಿ ರೂಪಾಯಿ ವೆಚ್ಚದಲ್ಲಿ 50 ರೂಪಾಯಿ ತುಂಬಿ ಹೆಸರು ನೋಂದಾಯಿಸಿಕೊಂಡ 30 ಸಾವಿರ ರೈತರಿಗೆ ನೀರಾವರಿ ಸೌಲಭ್ಯಕ್ಕಾಗಿ (ಐಪಿ ಸೆಟ್) ವಿದ್ಯುತ್ ಪೂರೈಕೆ ಮಾಡಲು ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ರೈತರಿಗಾಗಿ ರಾತ್ರಿ 7 ತಾಸು ವಿದ್ಯುತ್ ಕೊಡಲಾಗುತ್ತಿತ್ತು. ಆದರೆ ರಾತ್ರಿ ಸಮಯದಲ್ಲಿ ಅವರು ಅನುಭವಿಸುವ ಸಂಕಷ್ಟ ಅರಿತ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಗಲು ಹೊತ್ತಿನಲ್ಲಿಯೇ ವಿದ್ಯುತ್ ಪೂರೈಸಲು ಸೂಚಿಸಿದ್ದಾರೆ. ಹೀಗಾಗಿ ಗ್ರಿಡ್ ಪಕ್ಕದಲ್ಲಿಯೇ ಸೋಲಾರ್ ಪ್ಲಾಟ್ ಅನುಷ್ಠಾನ ಮಾಡಿ ಅಲ್ಲಿಂದ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಜಿಲ್ಲೆಯ ರೋಣ ತಾಲೂಕು ಮುಸಿಗೇರಿ ಹಾಗೂ ಚಿಕ್ಕಾಬಳ್ಳಾಪುರಗಳಲ್ಲಿ ಪ್ರಯೋಗಿಕವಾಗಿ ಈ ವ್ಯವಸ್ಥೆ ಮಾಡಿದ್ದು, ಅದು ಯಶಸ್ವಿಯಾಗಿದೆ. ಇದನ್ನೇ ನಮ್ಮೆಲ್ಲ ಹೆಸ್ಕಾಂ ವಿಭಾಗದಲ್ಲಿ ಅಳವಡಿಸಲು ನಿರ್ಧರಿಸಿದ್ದೇವೆ ಎಂದರು.
ಲಕ್ಷ್ಮೇಶ್ವರ ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿ, ಪಂಚ ಗ್ಯಾರಂಟಿಯ ಉಚಿತ ವಿದ್ಯುತ್ ಪೂರೈಕೆ ಯೋಜನೆಯಡಿ ತಾಲೂಕಿನಲ್ಲಿ ಶೇ.98ರಷ್ಟು ಫಲಾನುಭವಿಗಳಿಗೆ ಯೋಜನೆಯ ಲಾಭ ಮುಟ್ಟಿಸಿದ್ದೇವೆ. ಇನ್ನೂ ಯೋಜನೆ ಲಾಭ ಪಡೆಯದವರನ್ನು ಭೇಟಿ ಮಾಡಿ ಇರುವ ಸಮಸ್ಯೆಯನ್ನು ಪರಿಹರಿಸಿ ಅವರಿಗೂ ಯೋಜನೆ ತಲುಪುವಂತೆ ಮಾಡುತ್ತೇವೆ ಎಂದರು ತಿಳಿಸಿದರು.
ಹೆಸ್ಕಾಂನ ಇಇ ರಾಜೇಶ ಕಲ್ಯಾಣಶೆಟ್ಟರ ಮಾತನಾಡಿ, ಲಕ್ಷ್ಮೇಶ್ವರ ಹೆಸ್ಕಾ ಕಚೇರಿ ಅತ್ಯಂತ ಹಳೆಯದಾಗಿದ್ದು, ಅದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿದರು. ಈ ವೇಳೆ ರಾಮಣ್ಣ ಲಮಾಣಿ ಶಿಗ್ಲಿ, ಯಲ್ಲಪ್ಪ ತಳವಾರ, ರಮೇಶ ಬಾರಕಿ, ಸಾಯಿಬ್‌ಜಾನ್ ಹವಾಲ್ದಾರ, ಎಂ.ಎಂ. ಗದಗ, ಅಂಬರೀಶ ತೆಂಬದಮನಿ, ಹೆಸ್ಕಾಂ ಎಇಇ ಬಿ.ಆಂಜಿನಪ್ಪ, ಸೆಕ್ಷನ್ ಇಂಜಿನಿಯರ್ ಕಿರಣಕುಮಾರ ಪಮ್ಮಾರ, ಎಇ ಗುರುರಾಜ ಸಿ, ಮೇಲ್ಚಿಚಾರಕರಾದ ರಘುಪತಿ ನಾಯಕ, ಶಿಗ್ಲಿ ಶಾಖಾಧಿಕಾರಿ ಅಮರೇಶ ಹುಲಗೂರ, ಸಂತೋಷ ನಾಯಕ, ವಿಜಯಕುಮಾರ ಸೇರಿದಂತೆ ಮತ್ತಿತರರು ಇದ್ದರು.
ಸ್ಮಾರ್ಟ್ ಮೀಟರ್ ಬಗ್ಗೆ ಗೊತ್ತಿಲ್ಲ
ರಾಜ್ಯ ಸರ್ಕಾರ ಹೆಚ್ಚಿನ ಹಣ ತೆಗೆದುಕೊಂಡು ಸ್ಮಾಟ್ ಮೀಟರ್ ಅಳವಡಿಸಲು ಮುಂದಾಗಿದೆಯಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಸ್ಕಾಂ ನಿಗಮದ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ಈಗಾಗಲೇ ಮೈಸೂರು ಮತ್ತು ಬೆಂಗಳೂರು ನಗರದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸುವ ಕಾರ್ಯ ನಡೆದಿದೆ. ಆದರೆ ಮೀಟರ್ ದರದ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ. ಮುಂದಿನ ಸಭೆಗೆ ಬಂದಾಗ ಈ ಕುರಿತು ವಿವರಣೆ ನೀಡುವುದಾಗಿ ತಿಳಿಸಿದರು.



