ವಿಜಯಸಾಕ್ಷಿ ಸುದ್ದಿ, ಗದಗ: ಶಾಲೆಗಳು ದೇವಾಲಯ ಇದ್ದಂತೆ. ಅಲ್ಲಿ ಹೆಚ್ಚು ಗಂಟೆ ಬಾರಿಸಿದರೆ ಅದರಲ್ಲಿನ ಧನಾತ್ಮಕ ಕಂಪನದಿಂದ ಹೆಚ್ಚು ಜ್ಞಾನಿಗಳು, ಪ್ರಜಾವಂತರು ಹುಟ್ಟಿಕೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಪವಾಡಗಳನ್ನು ಬಯಲು ಮಾಡುವ ವೈಜ್ಞಾನಿಕ ಚಿಂತಕರಾದ ಡಾ. ಹುಲಿಕಲ್ ನಟರಾಜ್ ಹೇಳಿದರು.
ನಗರದ ಗಂಗಾಪೂರ ಪೇಟೆಯಲ್ಲಿರುವ ಶ್ರೀದುರ್ಗಾದೇವಿ ಶಿಕ್ಷಣ ಸಮಿತಿಯಲ್ಲಿ ಸನ್ಮಾನ ಸ್ವೀಕರಿಸಿ, ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಮಕ್ಕಳು ಅಪರಿಚಿತರು ನೀಡುವ ಚಾಕಲೇಟ್, ಪೇಪರ್, ಸಿಹಿ ತಿನಿಸು ಮತ್ತು ಲಿಂಬೆಹಣ್ಣಿನಂತಹ ಪದಾರ್ಥಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ದುಷ್ಕರ್ಮಿಗಳು ಅಮಾಯಕ ಮಕ್ಕಳನ್ನು ಪುಸಲಾಯಿಸಿ ಅಹಿತಕರ ಘಟನಗಳಿಗೆ ಕಾರಣಗಳಾಗುತ್ತಾರೆ. ಅದ್ದರಿಂದ ಮಕ್ಕಳು ಪಾಲಕರು ಮತ್ತು ಶಿಕ್ಷಕರ ಮಾತುಗಳನ್ನು ಮಾತ್ರ ಕೇಳಬೇಕೆಂದು ಸಲಹೆ ನೀಡಿದರು.
ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ನೀಡುವುದು ದೇವರ ಕೆಲಸವಾಗಿದೆ. ಆ ಕಾಯಕವನ್ನು ಶ್ರೀ ದುರ್ಗಾದೇವಿ ಶಿಕ್ಷಣ ಸಂಸ್ಥೆಯ ನಡೆದುಕೊಂಡು ಬಂದಿರುವುದು ಶ್ಲಾಘನೀಯ. ಈ ಶಾಲೆಯಲ್ಲಿ ಮಕ್ಕಳು ಚೆನ್ನಾಗಿ ಓದಿ, ಉತ್ತಮ ಸಾಧನೆ ಮಾಡಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಶಾಲೆಯ ಹಾಗೂ ದೇಶದ ಆಸ್ತಿಯಾದರೆ ಅದಕ್ಕಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ ಎಂದರು.
ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ನಿರ್ದೇಶಕಿ ಕವಿತಾ ಇಮರಾಪೂರ ಮಾತನಾಡಿ, ಮಕ್ಕಳಿಗೆ ಇಂದಿನ ದಿನಗಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚು ಮೂಡಿಸಬೇಕಿದೆ. ಮೂಡನಂಬಿಕೆಗಳನ್ನು ದೂರು ಮಾಡಿ ಮೂಲ ನಂಬಿಕೆಗಳಿಗೆ ಗೌರವ ಕೊಡಬೇಕಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ. ಹುಲಿಕಲ್ ನಟರಾಜ್ ಹಾಗೂ ದೇವಿಕಾ ನಟರಾಜ್ ದಂಪತಿಗಳಿಗೆ ಸಮಿತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರೋಣ ತಾಲೂಕು ಅಧ್ಯಕ್ಷರಾದ ವಿರೇಶ ನೇಗಲಿ, ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷರಾದ ಕರಿಯಪ್ಪ ಶಿರಹಟ್ಟಿ, ಮುಂಡರಗಿ ತಾಲೂಕಿನ ನೂತನ ಅಧ್ಯಕ್ಷ ಗಂಗಾಧರ ಬಳಿಗಾರ, ರಮೇಶಗೌಡ್ರ ಪಾಟೀಲ, ನರಗುಂದ ತಾಲೂಕಾಧ್ಯಕ್ಷ ವಿನಾಯಕ ಶಾಲದಾರ, ಗಜೇಂದ್ರಗಡದ ವೀರಣ್ಣ ಮಳಗಿ, ವಿರೇಶ ಪವಾಡಿಶೆಟ್ಟರ, ಸಾಗರ ಹಾಗೂ ಶಾಲೆಯ ಸಲಹಾ ಸಮಿತಿಯ ಸದಸ್ಯರಾದ ಮುತ್ತು ಜಡಿ, ಮುಖ್ಯೋಪಾಧ್ಯಾಯರಾದ ಎಚ್.ಎಂ. ನದಾಫ್, ಸಹ ಶಿಕ್ಷಕಿಯರಾದ ಮಂಜುಳಾ ಹಿಡ್ಕಿಮಠ, ಸುಧಾ ತಿರಕಣ್ಣವರ, ರೇಖಾ ಅಂಗಡಿ, ಮಂಜುಳಾ ದಾಸರ, ರೂಪಾ ಅಸೂಟಿ ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯಕುಮಾರ ಬಣಕಾರ ಮಾತನಾಡಿ, ಸಮಾಜದಲ್ಲಿ ಅಜ್ಞಾನದಿಂದಾಗಿ ಜಿಡ್ಡುಗಟ್ಟಿರುವ ಮೂಢನಂಬಿಕೆಗಳನ್ನು ಅಳಿಸಿ, ಜ್ಞಾನದಿಂದ ಸದೃಢ ಸಮಾಜ ಕಟ್ಟಲು ಎಲ್ಲರೂ ಶ್ರಮಿಸಬೇಕು. ಇಂದಿನ ಮಕ್ಕಳು ಮುಂದಿನ ದೇಶದ ಆಸ್ತಿಯಾಗಿರುವದರಿಂದ ಅವರಿಗೆ ಈಗಿನಿಂದಲೇ ಭವಿಷ್ಯದಲ್ಲಿ ಬೇಕಾಗುವ ಜ್ಞಾನವನ್ನು ನೀಡಬೇಕಾಗಿದೆ ಎಂದು ಹೇಳಿದರು.


