ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ದುಡಿಮೆ ಪ್ರಾಮಾಣಿಕವಾಗಿದ್ದರೆ ಮಾತ್ರ ಕಾಯಕವಾಗುತ್ತದೆ. ಈ ಪ್ರಾಮಾಣಿಕ ಕಾಯಕದಿಂದಲೇ ಕೈಲಾಸ ಕಾಣಬಹುದು ಎಂದು 12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕಕ್ಕೆ ಮಹತ್ವ ನೀಡಿ ಸಮಾಜಮುಖಿಗಳಾಗಿದ್ದಾರೆ. ಈ ದಿಸೆಯಲ್ಲಿ ಬಸವಣ್ಣನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಸ್ವಾಮಿಗಳು ಹೇಳಿದರು.
ಇಲ್ಲಿಯ ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ನಮ್ಮೂರ ಲಕ್ಷ ದೀಪೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಬಸವ ಪುರಾಣ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿದ್ದ ಬಹುತೇಕ ಶರಣರು ಪ್ರಾಮಾಣಿಕ ಕಾಯಕಕ್ಕೆ ಮಹತ್ವ ನೀಡಿದ್ದರು. ಬಸವಣ್ಣನವರು ತಮ್ಮ ವಚನದಲ್ಲಿ ಕಾಯಕದ ಬಗ್ಗೆ ಹೆಚ್ಚು ವಿಶ್ಲೇಷಿಸಿದ್ದಾರೆ. ದುಡಿಯದೇ ತಿನ್ನುವ ಹಕ್ಕು ಈ ಸಮಾಜದಲ್ಲಿ ಯಾರಿಗೂ ಇಲ್ಲ. ಅನ್ಯಾಯ, ಅಧರ್ಮದಿಂದ ದುಡಿದ ಹಣ ಪಾಪಕ್ಕೆ ಸಮಾನವಾಗುತ್ತದೆ. ಆದ್ದರಿಂದ ಬಸವನೆಂದರೆ ನೀತಿ, ದಾಸೋಹ, ಬದುಕು, ಉಸಿರು, ಧರ್ಮವಾಗಿದ್ದು ಬಸವ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದರು.
ವಿ.ಪ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಆದರ್ಶ, ಮಾನವೀಯ ಮೌಲ್ಯಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಕೊಟ್ಟೂರೇಶ್ವರ ಶ್ರೀಗಳು ಬಸವ ತತ್ವಗಳನ್ನು ಪುರಾಣದ ಮೂಲಕ ಬಿತ್ತರಿಸಿ ನ್ಯಾಯ-ನೀತಿಗಳನ್ನು ಪುನರ್ ಸ್ಥಾಪಿಸುತ್ತಿರುವ ಈ ಕಾರ್ಯ ಶ್ಲಾಘನೀಯವಾಗಿದೆ. ಕತ್ತಲೆಯನ್ನು ಕಳೆದು ಬೆಳಕು ಚೆಲ್ಲುವ ಈ ಲಕ್ಷ ದೀಪೋತ್ಸವ ಕಾರ್ಯಕ್ರಮದಿಂದ ಆರೋಗ್ಯ, ಆರ್ಥಿಕತೆ, ಸಂಕಷ್ಟಗಳು ದೂರವಾಗುತ್ತಿವೆ ಎಂದರು.
ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮಾತನಾಡಿ, ಬಸವಣ್ಣನವರ ವಚನಗಳು ವಿದ್ಯಾರ್ಥಿಗಳಿಗೆ ಚಿರಪರಿಚಿತವಾಗಿವೆ. ಆದರೆ ಮೊಬೈಲ್ ಗೀಳಿನಿಂದ ಶೇ 95ರಷ್ಟು ಯುವಕರು ಮತ್ತು ವಿದ್ಯಾರ್ಥಿಗಳು ದುಶ್ಚಟದ ದಾಸರಾಗುತ್ತಿರುವುದನ್ನು ತಪ್ಪಿಸಲು ಬಸವಣ್ಣನವರ ತತ್ವಾದರ್ಶಗಳ ಮೂಲಕ ಪಾಲಕರು ಸಂಸ್ಕಾರ ನೀಡಬೇಕು ಎಂದರು.
ಡಾ. ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ನಮ್ಮೂರ ಲಕ್ಷ ದೀಪೋತ್ಸವ ಕಾರ್ಯಕ್ಕೆ ಸಹಾಯ ಸಹಕಾರ ನೀಡಿದ ಭಕ್ತರ ಕಾರ್ಯ ಶ್ಲಾಘನೀಯವಾಗಿದ್ದು, ಗ್ರಂಥವನ್ನು ಪ್ರಕಟ ಮಾಡಲು ಸಹಾಯ ಧನ ನೀಡಿದ ಬೆಂಗಳೂರು ಮಿರಾಂಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಎನ್. ಕಾತರಕಿ ಅವರ ಸಮಾಜಮುಖಿ ಕಾರ್ಯ ಅಭಿನಂದನಾರ್ಹವಾಗಿದೆ ಎಂದರು.
ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದ ಗೌಡ ಪಾಟೀಲ ಮಾತನಾಡಿ, ವಚನಗಳ ತಳಹದಿಯನ್ನು ಅಧ್ಯಯನ ಮಾಡಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಗ್ರಂಥವನ್ನು ರಚನೆ ಮಾಡಿ ಈ ಸಮಾಜಕ್ಕೆ ನೀಡಿದ ಕೊಟ್ಟೂರೇಶ್ವರ ಶ್ರೀಗಳು ಕಾರ್ಯ ಸ್ತುತ್ಯಾರ್ಹ ಎಂದರು.
21 ದಿನ ಬಸವ ಪುರಾಣ ಪ್ರವಚನ ಮಾಡಿದ ಹಾವಲಿಂಗೇಶ್ವರ ಹಿರೇಮಠದ ಶಾಂತವೀರ ಶಿವಾಚಾರ್ಯರು ಬಸವಣ್ಣನವರು ಜಾತಿ, ಮೂಡನಂಬಿಕೆ, ನಿರ್ಮೂಲನೆಗಾಗಿ ಮಾಡಿದ ಕ್ರಾಂತಿಕಾರಕ ಬದಲಾವಣೆ ಮತ್ತು ಅವರು ಐಕ್ಯವಾದ ಚರಿತ್ರೆಯ ಕುರಿತು ವಿವರಿಸಿ ಪುರಾಣವನ್ನು ಮಂಗಲಗೊಳಿಸಿದರು.
ಡಾ. ಕೊಟ್ಟೂರೇಶ್ವರ ಶ್ರೀಗಳು ರಚನೆ ಮಾಡಿದ `ವಚನಕಾರರ ದೃಷ್ಟಿಯಲ್ಲಿ ಸಮಾನತೆ ಮತ್ತು ವೈಚಾರಿಕತೆ’ ಮತ್ತು ಮಳಖೇಡದ ಶ್ರೀಗಳು ರಚಿಸಿದ `ಜಗದ ಜಗದೀಶ್ವರ’ ಎಂಬ ಗ್ರಂಥಗಳನ್ನು ಡಾ. ಶೇಖರ ಸಜ್ಜನ ಅವರು ಬಿಡುಗಡೆಗೊಳಿಸಿದರು.
ಮಹಾಲಿಂಗಪೂರದ ಚನ್ನವೀರ ಶ್ರೀಗಳು, ಮಳಖೇಡದ ಕೊಟ್ಟೂರೇಶ್ವರ ಶಿವಾಚಾರ್ಯರು, ಜಾಕನಪಲ್ಲಿಯ ಗವಿಶಿದ್ಧಲಿಂಗ ಶ್ರೀಗಳು, ಕೊಟ್ರಯ್ಯಶಾಸ್ತಿçಗಳು ನರಗುಂದಮಠ, ರವಿ ದಂಡಿನ, ವೆಂಕರೆಡ್ಡಿ ಕೊಳ್ಳಿ, ಸಿದ್ದು ಆಲೂರು, ಕೆ.ಎಸ್. ಕೊಡ್ಲಿವಾಡ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ ವೇದಿಕೆಯಲ್ಲಿದ್ದರು. ಕೆ.ಬಿ. ಕೊಣ್ಣೂರು ಸ್ವಾಗತಿಸಿದರು. ವೆಂಕಟೇಶ ಜುಂಜಣಿ ನಿರೂಪಿಸಿದರು. ರಾಮಣ್ಣ ಬೆಳಧಡಿ ವಂದಿಸಿದರು.
ಡಾ ಬಿ.ಆರ್. ಅಂಬೇಡ್ಕರರು ಬರೆದ ಭಾರತದ ಸಂವಿದಾನದಲ್ಲಿ ಬಸವಣ್ಣನವರ ತತ್ವಗಳು ಅಡಗಿವೆ. ಹೀಗಾಗಿ ಸುವರ್ಣ ಸೌಧ ಮತ್ತು ದೆಹಲಿಯ ಸಂಸತ್ ಭವನದಲ್ಲಿ ಬಸವಣ್ಣನವರ ಅನುಭವ ಮಂಟಪದ ಚಿತ್ರ ಬಿಡಿಸಲಾಗಿದೆ.
– ಡಾ. ಶೇಖರ ಸಜ್ಜನರ,
ಖ್ಯಾತ ವೈದ್ಯರು-ಗದಗ.
ಡಾ. ಕೊಟ್ಟೂರೇಶ್ವರರು ರಚಿಸಿದ `ವಚನಕಾರರ ದೃಷ್ಟಿಯಲ್ಲಿ ಸಮಾನತೆ ಮತ್ತು ವೈಚಾರಿಕತೆ’ ಎಂಬ ಸಂಶೋಧನಾ ಗ್ರಂಥವು ಘನತೆ ಮತ್ತು ಗೌರವದಿಂದ ಕೂಡಿದ್ದು, ಪಿ.ಎಚ್.ಡಿ ಪದವಿಯ ಪಾವಿತ್ರö್ಯತೆ ಹೊಂದಿ, ಜನರಲ್ಲಿ ವಿಶ್ವಾಸವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.
– ಡಾ. ಶರಣಬಸವ ವೆಂಕಟಾಪೂರ.
ಗ್ರಂಥ ಮಾರ್ಗದರ್ಶಕರು.



