ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದು, ನಾಳೆ ಸಂಜೆ ಬಳಿಕ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಸಾರಿಗೆ ನೌಕರರು ‘ಬೆಂಗಳೂರು ಚಲೋ’ ಕರೆ ನೀಡಿದ್ದು, ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ನಾಳೆ ಸಂಜೆ 4 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಲಾಗಿದ್ದು, ಬೇಡಿಕೆಗಳ ಕುರಿತು ತೀರ್ಮಾನ ಕೈಗೊಳ್ಳದಿದ್ದರೆ ಸಾರಿಗೆ ಬಂದ್ ಮಾಡುವುದಾಗಿ ನೌಕರರು ಎಚ್ಚರಿಸಿದ್ದಾರೆ. ಸರ್ಕಾರದಿಂದ ಅಧಿಕೃತ ನಿರ್ಧಾರ ಹೊರಬಾರದಿದ್ದರೆ ಗುರುವಾರ ಸಂಜೆ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದೀಗ ಮುಷ್ಕರದ ಹಿನ್ನೆಲೆ ಕೆಎಸ್ಆರ್ಟಿಸಿ ಆಡಳಿತ ಮಂಡಳಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ. ಕರ್ತವ್ಯಕ್ಕೆ ಹಾಜರಾಗದ ನೌಕರರಿಗೆ ‘ನೋ ವರ್ಕ್, ನೋ ಪೇ’ ಅನ್ವಯಿಸಲಾಗುವುದು ಎಂದು ಸೂಚಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗಿಯಾದರೆ ಸೇವಾ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ಎಚ್ಚರಿಸಿದ್ದಾರೆ.



