ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಡಿದೆದ್ದಿರುವ ಸಾರಿಗೆ ನೌಕರರನ್ನು ಸರ್ಕಾರ ಎಷ್ಟೇ ಮನವೊಲಿಸಲು ಯತ್ನಿಸಿದರೂ ಫಲಕಾರಿಯಾಗಿಲ್ಲ. ಸರ್ಕಾರ ನೀಡಿರುವ ಹೊಸ ಆಫರ್ಗೂ ಬಗ್ಗದ ನೌಕರರು ಅದನ್ನು ತಿರಸ್ಕರಿಸಿ, ಪ್ರತಿಭಟನೆ ಮಾಡಿಯೇ ತೀರುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದಾರೆ.
ಸಾರಿಗೆ ನೌಕರರು ಮತ್ತು ಸರ್ಕಾರದ ನಡುವಿನ ಜಗ್ಗಾಟ ಹೊಂದಾಣಿಕೆ ಹಂತ ತಲುಪದೆ ಮುಂದುವರಿದಿದೆ. ತಮ್ಮ ಸಂಪೂರ್ಣ ಬೇಡಿಕೆ ಈಡೇರಲೇಬೇಕು ಎಂಬ ಒತ್ತಾಯದೊಂದಿಗೆ ನೌಕರರು ಇಂದು ‘ಬೆಂಗಳೂರು ಚಲೋ’ಗೆ ಕರೆ ನೀಡಿದ್ದಾರೆ.
ನೌಕರರ ಬೇಡಿಕೆ ಪ್ರಕಾರ 38 ತಿಂಗಳ ಅರಿಯರ್ಸ್ ಹಾಗೂ 2024ರಿಂದಲೇ ವೇತನ ಪರಿಷ್ಕರಣೆ ಜಾರಿಗೊಳಿಸಬೇಕೆಂದು ಆಗ್ರಹಿಸಲಾಗಿದೆ. ಆದರೆ ಸರ್ಕಾರ 26 ತಿಂಗಳ ಅರಿಯರ್ಸ್ ನೀಡುವ ಜೊತೆಗೆ 2025ರಿಂದ ವೇತನ ಪರಿಷ್ಕರಣೆ ಜಾರಿಗೊಳಿಸುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಈ ಆಫರ್ ಅನ್ನು ನೌಕರರು ತಿರಸ್ಕರಿಸಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ. ಸಂಜೆ 4 ಗಂಟೆಯವರೆಗೆ ಸರ್ಕಾರಕ್ಕೆ ಬೇಡಿಕೆ ಈಡೇರಿಸಲು ಅವಕಾಶ ನೀಡಲಾಗಿದೆ. ಸಂಜೆ ಒಳಗಾಗಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ, ಇಂದು ರಾತ್ರಿ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸುವ ಸಾಧ್ಯತೆ ಇದೆ.
ಈ ಬೆಳವಣಿಗೆಯಿಂದ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದೆ.



