ಕುರಿಗಾರರ ರಕ್ಷಣೆಗೆ ವಿಶೇಷ ಕಾಯ್ದೆ ಜಾರಿಗೊಳಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಂಡ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುರುಬ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು ಮತ್ತು ಕುರಿಗಾರರ ರಕ್ಷಣೆಗೆ ವಿಶೇಷ ಕಾಯ್ದೆ ಜಾರಿ ಮಾಡಬೇಕು ಎಂದು ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕಿರಪ್ಪ ಹೆಬಸೂರ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚೆಗೆ ಅರಣ್ಯ ಸಚಿವರು ಕಾಡಿನಲ್ಲಿ ಕುರಿಗಳನ್ನು ಬಿಡಬಾರದು ಎಂದು ಹೇಳಿರುವದು ಖಂಡನೀಯ. ಕುರಿಗಾರರ ರಕ್ಷಣೆಗಾಗಿ ಕುರುಬರ ಸಂಘ ಮತ್ತು ಹಾಲುಮತ ಮಹಾಸಭಾದಿಂದ ಪಕ್ಷಾತೀತವಾಗಿ ಹೋರಾಟ ಮಾಡಲಾಗುವದು ಎಂದು ಹೇಳಿದರು.

ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ರಾಜ್ಯದಲ್ಲಿರುವ ಶೋಷಿತ ಸಮುದಾಯಗಳು ಹಾಗೂ ಹಿಂದುಳಿದ ವರ್ಗಗಳು ಕುರಿಗಾರಿಕೆ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಗೂ ಜೀವನವನ್ನು ನಿಭಾಯಿಸುತ್ತಿದ್ದಾರೆ. ಬೆಟ್ಟ-ಗುಡ್ಡಗಳನ್ನು ಒಳಗೊಂಡಂತೆ ಆಯಾ ಪ್ರದೇಶಕ್ಕನುಗುಣವಾಗಿ ಸ್ಥಳೀಯವಾಗಿ ಹಾಗೂ ಹೊರಗೂ ಸಂಚರಿಸುವ ಮೂಲಕ ಪಾಲನೆ ಮಾಡುತ್ತಿದ್ದು, ಈ ಕುರಿಗಾರಿಕೆ ಬಡವರ ಪಾಲಿಗೆ ವರದಾನವಾಗಿದೆ. ಆದರೆ ಆಧುನಿಕತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಕುರಿಗಳಿಗೆ ಮೇವು ಸಿಗದಂತಾಗಿದ್ದು, ಕುರಿಗಾರರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿರುವ ಉದಾಹರಣೆಗಳಿವೆ. ರಾಜ್ಯದಲ್ಲಿರುವ ಗುಡ್ಡುಗಾಡು ಪ್ರದೇಶಗಳಲ್ಲಿ ಕುರಿ ಮೇಯಿಸಲು ಹೋದಾಗ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಹಾಗೂ ಸಿಬ್ಬಂದಿಗಳಿಂದ ನಿರಂತರ ಕಿರುಕುಳ, ದೌರ್ಜನ್ಯಗಳು ನಡೆಯುತ್ತಿವೆ ಎಂದರು.

ಕುರಿಗಾಹಿಕೆಯಿಂದ ಜೀವನ ನಡೆಸುತ್ತಿರುವ ಕುರಿಗಾರ ಮತ್ತು ಆತನ ಪರಿವಾರದ ಮೇಲೆ ಆಗುತ್ತಿರುವ ನಿರಂತರ ದೌರ್ಜನ್ಯಗಳಂತಹ ದುಷ್ಕ್ರತ್ಯಗಳ ಕಡಿವಾಣಕ್ಕಾಗಿ ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಾಗರಾಜ ಮೆಣಸಗಿ, ನಾಗಪ್ಪ ಗುಗ್ಗರಿ, ಸೋಮನಗೌಡ ಪಾಟೀಲ, ಬಸಪ್ಪ ಶಿರೂರ, ರಾಘು ವಗ್ಗನವರ, ಮೋಹನ ಇಮರಾಪೂರ, ಮುತ್ತು ಜಡಿ, ಸತೀಶ ಗಿಡ್ಡಹನುಮಣ್ಣವರ, ಹನುಮಂತ ಗಿಡ್ಡಹನುಮಣ್ಣವರ, ಆನಂದ ಜೋಗಾಡಿ, ಬಸಪ್ಪ ಗಿಡ್ಡಹನುಮಣ್ಣವರ ಮುಂತಾದವರು ಉಪಸ್ಥಿತರಿದ್ದರು.

ಸರ್ಕಾರವು 2024-25ನೇ ಸಾಲಿನ ಬಜೆಟ್‌ನಲ್ಲಿ ಕುರಿಗಾಹಿಗಳಿಗೆ ಸಂಬಂಧಿಸಿದಂತೆ ದೌರ್ಜನ್ಯ ತಡೆ ಕಾಯ್ದೆ ರೂಪಿಸಲು ಪ್ರಸ್ತಾಪಿಸಿದ್ದು, ಈಗ ಸರ್ಕಾರವು ಆಗಸ್ಟ್ 11ರಿಂದ ಆರಂಭವಾಗಿರುವ ಅಧಿವೇಶನದಲ್ಲಿ ಕಾಯ್ದೆಯಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ `ಕುರಿಗಾರರ ನಡಿಗೆ ವಿಧಾನಸೌಧ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಗಸ್ಟ್ 19ರಂದು ರಾಜ್ಯದ ಎಲ್ಲಾ ಭಾಗಗಳ ಕುರಿಗಾಹಿಗಳು ಸೇರಿ ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಗಿದೆ.

– ರುದ್ರಣ್ಣ ಗುಳಗುಳಿ.

ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷರು.


Spread the love

LEAVE A REPLY

Please enter your comment!
Please enter your name here