ಮಕ್ಕಳಲ್ಲಿನ ವೈಜ್ಞಾನಿಕ ಮನೋಭಾವನೆಯನ್ನು ಪ್ರೋತ್ಸಾಹಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಾಲಕರು ಮತ್ತು ಶಿಕ್ಷಕರು ಮಕ್ಕಳಲ್ಲಿರುವ ವೈಜ್ಞಾನಿಕ ಮನೋಭಾವನೆಯನ್ನು ಪ್ರೇರೇಪಿಸಲು ಪ್ರಯತ್ನಿಸಬೇಕು. ಅವರು ಮಾಡುವ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಅವರನ್ನು ನೀವು ಪ್ರೋತ್ಸಾಹಿಸಿದ್ದೇ ಆದರೆ ಅವರು ಮುಂದೊಂದು ದಿನ ಅತ್ಯುತ್ತಮ ವಿಜ್ಞಾನಿಯಾಗಿ ದೇಶ ಸೇವೆ ಮಾಡುತ್ತಾರೆ ಎಂದು ನಿವೃತ್ತ ಪ್ರಾಧ್ಯಾಪಕ ಎನ್.ಎಚ್. ಮಾಸರೆಡ್ಡಿ ಹೇಳಿದರು.

Advertisement

ಪಟ್ಟಣದ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದ ನಿರ್ಣಾಯಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಾಥಮಿಕ ಶಾಲಾ ಹಂತದ ಮಕ್ಕಳಲ್ಲಿ ಮುಗ್ಧತೆ ಇರುತ್ತದೆ. ಇದನ್ನು ಶಿಕ್ಷಕರು ಹೇಗೆ ಬೇಕಾದರೂ ರೂಪ, ಆಕಾರ ಕೊಡಬಹುದು. ಪಾಲಕರು ಮಕ್ಕಳಿಗೆ ಕಲಿಕಾ ಚಟುವಟಿಕೆಯ ಸಾಮಗ್ರಿಗಳನ್ನು ಕೊಡಬೇಕೇ ವಿನಃ ಮೊಬೈಲ್‌ನಂತಹ ವಸ್ತುಗಳನ್ನು ಅವರ ಕೈಗೆ ಕೊಡಬೇಡಿ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳ ಮೇಲೆ ದುಷ್ಟಪರಿಣಾಮ ಬೀರುತ್ತದೆ. ಹಲವಾರು ಕಾರ್ಯಚಟುವಟಿಕೆ ಮೂಲಕ ಇಂತಹ ವಿಜ್ಞಾನ ವಸ್ತು ಪ್ರದರ್ಶನ ಆಯೋಜನೆ ಮಾಡುವದರಿಂದ ಅವರಲ್ಲಿನ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಪ್ರತಿಯೊಬ್ಬ ಪಾಲಕರ ತಂದೆ-ತಾಯಿಗಳ ತ್ಯಾಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ಅಡಗಿರುತ್ತದೆ. ಮಕ್ಕಳು ನೈತಿಕ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ತಮ್ಮ ಪ್ರತಿಭೆಯನ್ನು ತೋರ್ಪಡಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂದಿನ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ಹಿಂದಿನ ಕಾಲದ ವಸ್ತುಗಳನ್ನು ಸಂಗ್ರಹಿಸಿ ಕಾಲಕ್ಕನುಗುಣವಾಗಿ ಬದಲಾದ ಅವುಗಳ ವಿವಿಧ ಮಾದರಿಗಳನ್ನು ಪ್ರದರ್ಶಿಸಿದ್ದಾರೆ. ಪಾಲಕರಾದವರು ಸಾಧ್ಯವಾದಷ್ಟು ಅವರೊಂದಿಗೆ ಹರ್ಷದಿಂದ ಇದ್ದು ಶುಚಿತ್ವದಿಂದ ಉತ್ತಮ ಸಂಸ್ಕಾರಯುತ ಚಾರಿತ್ರತೆಯುಳ್ಳವರನ್ನಾಗಿ ಮಾಡುವದರಿಂದ ಈ ದೇಶದ ಉತ್ತಮ ಪ್ರಜೆಯಾಗಿಸಬಹುದೆಂದರು.

ಸಂಸ್ಥೆಯ ಉಪಾಧ್ಯಕ್ಷ ಎಸ್.ಕೆ. ಪಾಟೀಲ, ಕಾರ್ಯದರ್ಶಿ ಈಶ್ವರ ಬೆಟಗೇರಿ, ಎಮ್.ಎ. ಹಿರೆವಡೆಯರ, ಡಾ. ಆರ್.ಕೆ. ಗಚ್ಚಿನಮಠ, ಮುತ್ತಣ್ಣ ಪಲ್ಲೇದ, ಶರಣಪ್ಪ ಜುಟ್ಲ ಹಾಗೂ ಮುಖ್ಯೋಪಾಧ್ಯಾಯೆ ನಿರ್ಮಲಾ ಹಿರೇಮಠ ಉಪಸ್ಥಿತರಿದ್ದರು. ಎ.ಎಮ್. ಬೆಟಗೇರಿ ಸ್ವಾಗತಿಸಿದರು. ಹುಚ್ಚೀರಪ್ಪ ಈಟಿ ನಿರೂಪಿಸಿದರು. ಈಶ್ವರ ಆದಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here