ವಿಜಯಸಾಕ್ಷಿ ಸುದ್ದಿ, ಧಾರವಾಡ: ತಂದೆಯ ಸಾವಿನ ದುಃಖದ ನಡುವೆಯೂ ನವಲಗುಂದ ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ ವಿದ್ಯಾರ್ಥಿನಿ ಶಬಾನಾ ನೂರ್‌ಹಸನ್ ಪಟಾಸು ಅವರು ಕಳೆದ ಮಾರ್ಚ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿ ನಂತರ ಪ್ರಕಟಗೊಂಡ ಫಲಿತಾಂಶದಲ್ಲಿ ಶೇ. 70 ಅಂಕ ಪಡೆದು ಎಸ್‌ಎಸ್‌ಎಲ್‌ಸಿ ಪಾಸಾಗಿದ್ದಳು.
ಸದಾಕಾಲ ಬಡವರು, ಹಿಂದುಳಿದವರು, ಮಹಿಳೆ, ಮಕ್ಕಳ ಬಗ್ಗೆ ಅತೀವ ಕಾಳಜಿ, ಕಳಕಳಿ ತೋರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಪರೀಕ್ಷೆ ದಿನದಂದೇ ತಂದೆ ನಿಧನರಾದರೂ ನೋವಿನಲ್ಲೂ ಅಂದಿನ ಪರೀಕ್ಷೆಗೆ ಗೈರುಹಾಜರಾಗದೆ ಪರೀಕ್ಷೆ ಬರೆದು ಇತರರಿಗೆ ಮಾದರಿಯಾಗಿರುವ ಶಬಾನಾಳ ಮನೆ ಬಾಗಿಲಿಗೆ ಹೋಗಿ, ಅವಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಒಂದೇ ದಿನದಲ್ಲಿ ಅವಳ ತಾಯಿಗೆ ವಿಧವಾ ವೇತನ, ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆಯಡಿ ಪರಿಹಾರ ನೀಡಿ, ಧೈರ್ಯ ತುಂಬಿದ್ದರು.
ಈ ವಿದ್ಯಾರ್ಥಿನಿ ಸೋಮವಾರ ಧಾರವಾಡ ಜಿಲ್ಲಾ ಪಂಚಾಯತಗೆ ಆಗಮಿಸಿ, ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಉಪ ವಿಭಾಗಧಿಕಾರಿ ಶಾಲಂ ಹುಸೇನ್, ಡಿಡಿಪಿಐ ಕೆಳದಿಮಠ ಅವರನ್ನು ಭೇಟಿ ಮಾಡಿ ಸಿಹಿ ನೀಡಿ ಕೃತಜ್ಞತೆ ಸಲ್ಲಿಸಿದಳು.
ಸದ್ಯ ಶಾಸಕ ಎನ್.ಎಚ್. ಕೋನರಡ್ಡಿ ಪುರಸಭೆಯಿಂದ ನೀಡುತ್ತಿರುವ ಆಶ್ರಯ ನಿವೇಶನ ಮಂಜೂರಿ ಮಾಡಿ ಪಲಾನುಭವಿ ಪಾಲಿನ ಒಂದು ಲಕ್ಷ ಹಣವನ್ನು ಸರಕಾರಕ್ಕೆ ತುಂಬಿ ಮನೆ ನಿರ್ಮಾಣ ಮಾಡುತ್ತಿದ್ದು, ಇನ್ನೆರಡು ತಿಂಗಳಲ್ಲಿ ಸಂಪೂರ್ಣ ಮನೆ ನಿರ್ಮಾಣ ಮಾಡಿ ಶಬಾನಾ ಅವರಿಗೆ ಮನೆ ಹಸ್ತಾಂತರ ಮಾಡಲಿದ್ದಾರೆ.
ಜಿಲ್ಲಾಧಿಕಾರಿಗಳು ಈಗಾಗಲೇ ತಾಯಿಗೆ ವಿಧವಾ ವೇತನ, ರಾಷ್ಟ್ರೀಯ ಕೌಟುಂಬಿಕ ನೆರವು, ಮಕ್ಕಳ ರಕ್ಷಣಾ ಘಟಕದಿಂದ ಏಕಪೋಷಕರ ಯೋಜನೆಯಡಿ ಶಿಷ್ಯ ವೇತನ ಹಾಗೂ ಶಬಾನಾ ಅವರ ತಾಯಿಗೆ ಮಾನಸಿಕ ಕಾಯಿಲೆಯಿಂದ ಗುಣಮುಖರಾಗುವ ಔಷದಿಯನ್ನು ವೈದ್ಯರ ಮೂಲಕ ಕೊಡಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳನ್ನು ತನ್ನ ಕುಟುಂಬದೊಂದಿಗೆ ಭೇಟಿ ಮಾಡಿದ ಶಬಾನಾ, ಈಗ ಪಿಯುಸಿ ಓದಲು ಇಚ್ಛಿಸಿ, ಕಾಲೇಜು ಅಡ್ಮೀಶನ್ ಫೀ, ಹಾಸ್ಟೆಲ್ ಸೌಲಭ್ಯಕ್ಕಾಗಿ ವಿನಂತಿಸಿದ್ದಾಳೆ. ಜಿಲ್ಲಾಧಿಕಾರಿಗಳು ಎಲ್ಲವನ್ನು ಕಲ್ಪಿಸಿ ಅವಳ ಓದಿಗೆ ನೇರವಾಗುವ ಭರವಸೆ ನೀಡಿದ್ದು, ಅವಳ ಸಹೋದರಿಯರ ಓದಿಗೆ ಅಗತ್ಯ ಸೌಲಭ್ಯ, ಸಹಾಯ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ನವಲಗುಂದ ತಹಸೀಲ್ದಾರ ಸುಧೀರ ಸಾಹುಕಾರ, ಪುರಸಭೆ ಮುಖ್ಯಾಧಿಕಾರಿ ಎಸ್.ಪಿ. ಪೂಜಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ. ಮಲ್ಲಾಡ, ವಾರ್ತಾ ಇಲಾಖೆಯ ಡಾ. ಎಸ್.ಎಂ. ಹಿರೇಮಠ ಇತರರು ಉಪಸ್ಥಿತರಿದ್ದರು.
ಕುಟುಂಬದಲ್ಲಿ ತಾಯಿ ಮಾನಸಿಕ ಅಸ್ವಸ್ಥೆ. ತಂದೆ ಇಲ್ಲ. ತಾಯಿಯ ಸಹೋದರ ಈ ಕುಟುಂಬದ ಪಾಲಕ. ಶಬಾನಾ ಸೇರಿ 4 ಜನ ಹೆಣ್ಣುಮಕ್ಕಳು. ಮನೆಗೆ ಶಬಾನಾ ಹಿರಿಯ ಮಗಳು. ಈ ವಿದ್ಯಾರ್ಥಿನಿಗೆ ಅನುಕೂಲವಾಗುವಂತೆ ಅವರ ಕುಟುಂಬಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪಶು ಪಾಲನಾ ಇಲಾಖೆಯಿಂದ ಸ್ವಯಂ ಉದ್ಯೋಗ ಯೋಜನೆಯಡಿ, 40 ಕೋಳಿ ಮರಿಗಳನ್ನು ನೀಡಿದ್ದು, ಜೀವನೋಪಾಯ ನಡೆಯುತ್ತಿದೆ.



