ವಿಜಯಸಾಕ್ಷಿ ಸುದ್ದಿ, ಗದಗ: ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮತ್ತು ಕಲಿಕೆಯಲ್ಲಿ ನಿಧಾನಗತಿಯ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಗದಗ ಜಿಲ್ಲಾ ಉಪನಿರ್ದೇಶಕರು ಹಾಗೂ ಅಭಿವೃದ್ಧಿ ತಂಡವು ಹಾತಲಗೇರಿ ಸರ್ಕಾರಿ ಪ್ರೌಢಶಾಲೆ (ಖಒSಂ)ಗೆ ವಿಶೇಷ ಭೇಟಿ ನೀಡಿತು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಜಿ.ಎಂ. ಮುಂದಿನಮನಿ ನೇತೃತ್ವದಲ್ಲಿ ಉಪನ್ಯಾಸಕರಾದ ಎಸ್.ಆರ್. ನದಾಫ್, ಜಿ.ಡಿ. ದಾಸರ, ವಾಯ್.ಕೆ. ಹಂದ್ರಾಳ, ಸುಧಾ ಬನ್ನಿಕಲ್ ಹಾಗೂ ಹಿರಿಯ ಉಪನ್ಯಾಸಕರಾದ ಬಿ.ಎಫ್. ಅರವಟಗಿ ಉಪಸ್ಥಿತರಿದ್ದು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪ್ರಶ್ನೋತ್ತರಗಳ ಮೂಲಕ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಿ, ಪರೀಕ್ಷೆಗೆ ಸಜ್ಜಾಗುವಂತೆ ಪ್ರೇರೇಪಿಸಿದರು.
ನಂತರ ತಂಡವು ಊರಿನ ಹಿರಿಯರು ಮತ್ತು ಶಿಕ್ಷಣ ಪ್ರೇಮಿಗಳೊಂದಿಗೆ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಪಾಲಕರೊಂದಿಗೆ ಚರ್ಚಿಸಿತು. ಟಿ.ವಿ. ಮತ್ತು ಮೊಬೈಲ್ ಬಳಕೆ ನಿಯಂತ್ರಿಸಿ, ಜಾತ್ರೆ–ಹಬ್ಬಗಳಲ್ಲಿ ಕಾಲಹರಣ ಮಾಡದೆ ವೇಳಾಪಟ್ಟಿಯಂತೆ ಅಭ್ಯಾಸ ನಡೆಸುವಂತೆ ಸೂಚಿಸಲಾಯಿತು. ರಾಜ್ಯ ಮಟ್ಟದ 3ನೇ ಪೂರ್ವ ಸಿದ್ಧತಾ ಪರೀಕ್ಷೆಗೆ ಗಂಭೀರವಾಗಿ ತಯಾರಿ ನಡೆಸುವಂತೆ ಮಾರ್ಗದರ್ಶನ ನೀಡಲಾಯಿತು.
ಪರೀಕ್ಷಾ ಅವಧಿಯಲ್ಲಿ ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವುದು ಹಾಗೂ ಉಳಿದ 44 ದಿನಗಳನ್ನು ಕ್ರಿಯಾ ಯೋಜನೆಯಂತೆ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮಕ್ಕಳಿಗೆ ತಿಳಿಸಲಾಯಿತು. ಮನೆವಾರ್ಷಿಕ ಪರೀಕ್ಷೆಯನ್ನು ನಿರ್ಭಯವಾಗಿ ಎದುರಿಸಿ, 40+ ಗುರಿ ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಒಟ್ಟಾರೆ ಗುಣಾತ್ಮಕ ಫಲಿತಾಂಶ ಹೆಚ್ಚಿಸುವ ದಿಶೆಯಲ್ಲಿ ಈ ಮನೆ ಭೇಟಿ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.



