ವಿಜಯಸಾಕ್ಷಿ ಸುದ್ದಿ, ಗದಗ: ಯುವಕರು ಕೃಷಿಯತ್ತ ಮುಖ ಮಾಡಬೇಕು. ಅದೂ ರಾಸಾಯನಿಕ ಮುಕ್ತ ಸಾವಯವ ಕೃಷಿಯಲ್ಲಿ ತೊಡಗುವ ಮೂಲಕ ತಮ್ಮ ಕುಟುಂಬ ಹಾಗೂ ಸಮಾಜದ ಸ್ವಾಸ್ತ್ಯ ಕಾಪಾಡಬೇಕು ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಯುವ ಮುಖಂಡ ಕೃಷ್ಣಗೌಡ ಪಾಟೀಲ ಹೇಳಿದರು.
‘ಜಾಗತಿಕ ಮಣ್ಣು ದಿನ’ ಆಚರಣೆ ಅಂಗವಾಗಿ ಸಂಕಲ್ಪ ಸಂಸ್ಥೆಯ ವತಿಯಿಂದ ತಾಲೂಕಿನ ಬೆಳಧಡಿ ತಾಂಡಾದ ಶ್ರೀ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಅಜೀಂ ಪ್ರೇಮಜಿ ಫೌಂಡೇಶನ್ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾರಂಭವನ್ನು ಉದ್ಘಾಟಿಸಿದ ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಸಲಹೆಗಾರರಾದ ಡಾ. ಎಲ್.ಎಚ್. ಹೀರೇಗೌಡ್ರ ಮಾತನಾಡಿ, ಸಂಕಲ್ಪ ಸಂಸ್ಥೆಯು ಗದಗ ಜಿಲ್ಲೆಯ ಮಂಡರಗಿ ಭಾಗದಲ್ಲಿ ಕೃಷಿ ಹೊಂಡಗಳು ಮತ್ತು ದೊಡ್ಡ ಊರಿನ ಕೆರೆಗಳ ಹೂಳೆತ್ತುವ ಕೆಲಸವನ್ನು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಆಯ್ದ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದು ಇದರ ಹೆಗ್ಗುರುತಾಗಿದೆ. ಹಾಗಾಗಿ ಈ ವರ್ಷದಿಂದ ಮುಂದಿನ ಮೂರು ವರ್ಷಗಳ ಕಾಲ ಸಂಕಲ್ಪ ಸಂಸ್ಥೆಯು ಗದಗ ತಾಲೂಕಿನ 13 ಹಳ್ಳಿಗಳಲ್ಲಿ ಬೋರ್‌ವೆಲ್ ರೀಚಾರ್ಜ್, ಕೃಷಿ ಹೊಂಡ ಮತ್ತು ಸಾರ್ವಜನಿಕ ಕೆರೆಗಳ ಹೂಳೆತ್ತುವ ಯೋಜನೆಯನ್ನು ನಿರ್ವಹಿಸಲು ಸಿದ್ಧವಾಗಿದೆ ಎಂದರು.
ಹುಲಕೋಟಿಯ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ಸಲಹೆಗಾರ ಡಾ. ಎನ್.ಎಚ್. ಬಂಡಿ ಮಾತನಾಡಿ, ಜಾಗತಿಕ ಮಣ್ಣು ದಿನದ ಆಚರಣೆ ಮಾಡುತ್ತಿದ್ದು, ನಾವುಗಳು ಮಣ್ಣಿನ ಫಲವತ್ತತೆ ಮತ್ತು ತಂತ್ರಜ್ಞಾನದ ಅರಿವನ್ನು ಹೊಂದಿರಬೇಕು ಎಂದು ವಿವರವಾದ ಮಾಹಿತಿಯನ್ನು ತಿಳಿಸಿದರು.
ಸಂಕಲ್ಪ ರೂರಲ್ ಡೆವಲಪ್‌ಮೆಮಟ್ ಸೊಸೈಟಿಯ ಸಂಸ್ಥಾಪಕ ಸಿಕಂದರ ಮೀರಾನಾಯಕ ಮಾತನಾಡಿ, ಸಂಕಲ್ಪ ಸಂಸ್ಥೆಯು ನಡೆದುಬಂದ ದಾರಿಯನ್ನು ವಿಸ್ತಾರವಾಗಿ ತಿಳಿಸುತ್ತ, ನಮ್ಮ ಸಂಕಲ್ಪ ಸಂಸ್ಥೆ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು.
ಬೆಳಧಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕ್ರಪ್ಪ ಶಿವಪ್ಪ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮವ್ವ ಮುತ್ತಪ್ಪ ಮುಂದಲಮನಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಹನಮಂತ ದಾಸರ ಸೇರಿದಂತೆ ಗ್ರಾಮಸ್ಥರು, ಯುವಕರು ಮತ್ತು ಮಹಿಳೆಯರು ಭಾಗವಹಿಸಿದ್ದರು.
ಜನರ ಒಗ್ಗಟ್ಟು ಮತ್ತು ಸಹಕಾರ ಇದ್ದರೆ ಇಂತಹ ಸಂಘ-ಸಂಸ್ಥೆಗಳು ಸಾಕಷ್ಟು ಯೋಜನೆಗಳನ್ನು ತಂದು ಕೊಡುತ್ತವೆ. ಇಂತಹ ಸಂಸ್ಥೆಗಳೊಂದಿಗೆ ಯಾವುದೇ ರಿತೀಯ ರಾಜಕೀಯ ಮಾಡದೇ ಸಹಕಾರ ನೀಡಿದರೆ ನಿಮ್ಮ ಜೀವನಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಇದರ ಉಪಯೋಗವನ್ನು ಪಡೆದುಕೊಂಡು ಅಭಿವೃದ್ಧಿಯೊಂದಿಗೆ ಸಾಗುವ ಗುರಿಯನ್ನು ಹೊಂದಬೇಕು ಎಂದು ಕೃಷ್ಣಗೌಡ ಪಾಟೀಲ ಸಲಹೆ ನೀಡಿದರು.