ಉತ್ತರ ಪ್ರದೇಶ: ದಿನಬೆಳಗಾದರೆ ಹತ್ತಾರು ಆತ್ಮಹತ್ಯೆಯ ಕೇಸ್ ಬಗ್ಗೆ ಓದುತ್ತಲೇ ಇರುತ್ತೇವೆ. ಆಘಾತಕಾರಿ ವಿಚಾರ ಅಂದ್ರೆ ಇನ್ನೂ ಬದುಕನ್ನು ನೋಡದ, ಬದುಕಿ ಬಾಳ ಬೇಕಾದ ಯುವಜನರೇ ದಿನನಿತ್ಯ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಇದೀಗ ಜೆಇಇ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ 18 ವರ್ಷದ ಇಂಜಿನಿಯರ್ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.
ಅದಿತಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು, ಅದಿತಿ ಉತ್ತರ ಪ್ರದೇಶದ ಗೋರಖ್‌ಪುರದ ಕ್ಯಾಂಟ್ ಪೊಲೀಸ್ ಠಾಣೆಯಿರುವ ಮೊಮೆಂಟಮ್ ಕೋಚಿಂಗ್ ಸೆಂಟರ್‌ನ ವಿದ್ಯಾರ್ಥಿಯಾಗಿದ್ದಳು. 2 ವರ್ಷಗಳಿಂದ ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಾ, ಸತ್ಯದೀಪ ವಿದ್ಯಾರ್ಥಿ ನಿಲಯದಲ್ಲಿದ್ದಳು.
ಜೆಇಇ ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಬುಧವಾರ ಬೆಳಗ್ಗೆ ಮನೆಗೆ ಕರೆಮಾಡಿ ತಂದೆಯ ಬಳಿ ಮೊಬೈಲ್ ಫೋನ್‌ಗೆ ರಿಚಾರ್ಜ್ ಮಾಡುವಂತೆ ಹೇಳಿದ್ದಳು. ಅದೇ ಸಮಯದಲ್ಲಿ, ಅದಿತಿಯ ರೂಮ್‌ಮೇಟ್ ಹೊರಗೆ ಹೋಗಿದ್ದರು.
ಹೊರಗಡೆ ಹೋಗಿದ್ದ ರೂಮ್‌ಮೇಟ್ ವಾಪಾಸಾಗಿದ್ದು, ರೂಮ್ ಬಾಗಿಲು ಬಡಿದಿದ್ದಾಳೆ. ಈ ವೇಳೆ ಅದಿತಿ ಯಾವುದೇ ಪ್ರತಿಕ್ರಿಯೆ ನೀಡದಿದ್ದರಿಂದ ಅನುಮಾನಗೊಂಡು ಕಿಟಕಿಯಿಂದ ಒಳಗೆ ನೋಡಿದಾಗ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ. ಬಳಿಕ ಆಕೆಯ ರೂಮ್‌ಮೇಟ್ ಹಾಸ್ಟೆಲ್ ವಾರ್ಡನ್‌ಗೆ ವಿಷಯ ತಿಳಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅದಿತಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವೇ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.