ಕೈ ಚಾಚಿದ್ದು ಸಾಕು, ಮುಂದೆ ಏನು ಮಾಡಬೇಕೊ ಅದನ್ನು ಮಾಡೋಣ: ಕಿಚ್ಚ ಸುದೀಪ್

0
Spread the love

ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋದಲ್ಲಿದ್ದ ಮೇರು ನಟ ಡಾ. ವಿಷ್ಣುವರ್ಧನ್‌ ಅವರ ಮೂಲ ಸಮಾಧಿ ಜಾಗವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಈ ಬಗ್ಗೆ ವಿಷ್ಣುವರ್ಧನ್‌ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ಈ ಬಗ್ಗೆ ನಟ ಕಿಚ್ಚ ಸುದೀಪ್‌ ವಿಡಿಯೋ ಮೂಲಕ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

Advertisement

‘ವಿಷ್ಣು ಸರ್ ಸಮಾಧಿಯೊಟ್ಟಿಗೆ ಏನು ನಡೆಯಿತೊ ಅದು ನಡೆಯಬಾರದಿತ್ತು. ಇಲ್ಲಿ ಒಂದು ಚೆನ್ನಾಗಿ ಅರ್ಥವಾಗುತ್ತದೆ. ಒಂದೇ ಊರು, ಒಂದೇ ರಾಜ್ಯ, ನಮ್ಮದೇ ಕಲಾವಿದರು ಆದರೆ ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ. ನಾವುಗಳು ಓಡಾಡಿದ್ದಾಯ್ತು, ನೀವುಗಳು ಹೋರಾಡಿದ್ದಾಯ್ತು, ಎಲ್ಲರಲ್ಲಿ ಮನವಿ ಮಾಡಿಕೊಂಡಿದ್ದಾಯ್ತು. ದಯವಿಟ್ಟು ಇದನ್ನು ಮಾಡಿಕೊಡಿ, ಸ್ವಲ್ಪ ಕರುಣೆ ತೋರಿಸಿ ಎಂದು ಕೇಳಿಕೊಂಡಿದ್ದಾಯ್ತು. ಅಧಿಕಾರದಲ್ಲಿರುವವರಿಗೆ ಇದು ದೊಡ್ಡ ವಿಷಯ ಆಗಿರಲಿಲ್ಲ. ಅವರ ಸಣ್ಣ ಪ್ರಯತ್ನ ಸಹ ಇಂದು ನಡೆದಿರುವುದನ್ನು ತಡೆಯುತ್ತಿತ್ತು’ ಎಂದು ಸುದೀಪ್‌ ಹೇಳಿದ್ದಾರೆ.

‘ಇನ್ನು ಮುಂದೆ ನಾವು ಭಿಕ್ಷೆ ಬೇಡಬೇಕಾದ ಅವಶ್ಯಕತೆ ಇಲ್ಲ. ಮಾಡಬೇಕು ಎಂದುಕೊಂಡಿದ್ದರೆ ಇಷ್ಟು ಹೊತ್ತಿಗೆ ಮಾಡಿರುತ್ತಿದ್ದರು. ಆದರೆ ಈ ವರೆಗೆ ಮಾಡಿಲ್ಲ ಅಂದರೆ ಅರ್ಥ ಮಾಡಿಕೊಳ್ಳಿ. ಯಾರು? ಏನು? ಹೇಗೆ ಎತ್ತಿಟ್ಟರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಈಗ ಅದು ಮುಗಿದು ಹೋದ ಕತೆ. ಅದನ್ನು ಬದಿಗಿಟ್ಟು, ನಾವು ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸೋಣ’ ಎಂದು ಸುದೀಪ್‌ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

‘ನಾನು ಇತ್ತೀಚೆಗಷ್ಟೆ ವೀರಕಪುತ್ರ ಶ್ರೀನಿವಾಸ್​ ಅವರ ಬಳಿ ಮಾತನಾಡುತ್ತಿದ್ದೆ. ಅವರು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಆದಷ್ಟು ಬೇಗ ದೊಡ್ಡ ಪ್ರತಿಮೆ ಕಟ್ಟೋಣ ಎಂದುಕೊಂಡಿದ್ದಾರೆ. ಅದನ್ನು ನಾವು ಮಾಡೋಣ. ಆ ಪ್ರತಿಮೆ ನಿರ್ಮಾಣಕ್ಕೆ ನಾನು ನನ್ನ ಕೈಲಾದ ಸಹಾಯವನ್ನು ಮಾಡಲಿದ್ದೇನೆ’ ಎಂದು ಸುದೀಪ್ ಹೇಳಿದ್ದಾರೆ.

‘ಎಲ್ಲರಿಗೂ ನೋವಾಗಿದೆ. ಈ ಘಟನೆ ಆಗಬಾರದಿತ್ತು. ರಾತ್ರೋರಾತ್ರಿ ಹೀಗೆ ಮಾಡಿದ್ದು ಹೇಡಿತನವೂ ಹೌದು. ಹೀಗೆ ಮಾಡಿದವರು ಹೇಡಿಗಳು. ನೋವಾಗುತ್ತೆ ಆದರೆ ಅದರಿಂದ ಹೊರಗೆ ಬರಬೇಕಿದೆ. ಹತ್ತು ನಿಮಿಷ ಕಣ್ಣೀರು ಹಾಕಿ 11 ನೇ ನಿಮಿಷ ಮುಂದೆ ಏನು ಮಾಡಬೇಕು ಎಂದು ಯೋಚಿಸಿ ಮುಂದೆ ಹೋಗುವುದು ನನ್ನ ಅಭ್ಯಾಸ. ನೀವು ಅದನ್ನೇ ಮಾಡುತ್ತೀರ ಎಂದು ಆಶಿಸುತ್ತೇನೆ. ಕೈ ಚಾಚಿದ್ದು ಸಾಕು. ಮುಂದೆ ಏನು ಮಾಡಬೇಕೊ ಅದನ್ನು ಮಾಡೋಣ’ ಎಂದಿದ್ದಾರೆ ಸುದೀಪ್.


Spread the love

LEAVE A REPLY

Please enter your comment!
Please enter your name here