ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂಳಿದ ವರ್ಗಗಳ ಆಯೋಗದಿಂದ ಆರಂಭವಾದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮಾಜ ಬಾಂಧವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು ಅಂತ ಅಖಿಲ ಭಾರತ ಪಂಚಮಸಾಲಿ ಸಮಾಜದ ಗದಗ ಜಿಲ್ಲಾ ಮಹಿಳಾ ಅಧ್ಯಕ್ಷೆ ಸ್ವಾತಿ ಅಕ್ಕಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಂದೂ ಧರ್ಮ ಬರೆಸುವ ಕುರಿತು ಯಾವುದೇ ಗೊಂದಲ ಬೇಡ. ಈಗಾಗಲೇ ನಮ್ಮ ಶ್ರೀಗಳು ಧರ್ಮದ ಕಾಲಂನಲ್ಲಿ ಹಿಂದೂ ಎಂಬುದಾಗಿ ಬರೆಸಬೇಕೆಂದು ಹೇಳಿದ್ದಾರೆ. ವೀರಶೈವ ಲಿಂಗಾಯತರು ಸಾಮಾಜಿಕವಾಗಿ ಒಂದು ಧರ್ಮದ ಕಾಲಂನಲ್ಲಿ ಹಿಂದೂ ಅಂತಲೇ ಬರೆಸಬೇಕು. ಈ ವಿಚಾರದಲ್ಲಿ ಲಿಂಗಾಯತ ಪಂಚಮಸಾಲಿ ಬಾಂಧವರಲ್ಲಿ ಯಾವುದೇ ಗೊಂದಲವೂ ಇಲ್ಲ.
ಇದು ಕೇವಲ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಲ್ಲ. ಇದರಲ್ಲಿ ರಾಜಕೀಯವೂ ಇದೆ. ಲಿಂಗಾಯತರನ್ನು ಒಡೆಯುವ ವ್ಯವಸ್ಥಿತ ಹುನ್ನಾರ ಕೂಡ ನಡೆಯುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ನಮ್ಮ ಸಮುದಾಯದ ಸಂಖ್ಯೆಯು ಗಣತಿಯಲ್ಲಿ ಕಡಿಮೆಯಾದರೆ ನಮಗೆ ಸಿಗುವಂತಹ ಮೀಸಲಾತಿಯ ಪ್ರಮಾಣವೇ ಕಡಿಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಾತಿಗಣತಿಯ ಸಮೀಕ್ಷೆ ಕಾರ್ಯ ಈಗಾಗಲೇ ರಾಜ್ಯಾದ್ಯಂತ ನಡೆದಿದೆ. ಗದಗ ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದ್ದು, ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ಸರ್ವರ್ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಸಮೀಕ್ಷೆ ಕಾರ್ಯವನ್ನು ಇನ್ನಷ್ಟು ದಿನ ಮುಂದೂಡಬೇಕು ಎಂದು ಸ್ವಾತಿ ಅಕ್ಕಿ ಹೇಳಿದ್ದಾರೆ.