ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಹುಲಕೋಟಿಯ ಐ.ಸಿ.ಎ.ಆರ್–ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಪಶು ಸಂಗೋಪನಾ ಶ್ರೇಷ್ಠತೆ ಕೇಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹುಲಕೋಟಿಯ ಐ.ಸಿ.ಎ.ಆರ್ – ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೂರು ದಿನಗಳ ಹೈನೋದ್ಯಮ ಹಾಗೂ ಪಶುಸಂಗೋಪನೆಯಲ್ಲಿ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆರವೇರಿತು.
ಗದಗ ಜಿಲ್ಲೆಯ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿದೇರ್ಶಕ ಡಾ. ಎಚ್.ಬಿ. ಹುಲಗಣ್ಣವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಕೃಷಿಯಲ್ಲಿ ವೈಜ್ಞಾನಿಕ ಪಶು ಸಂಗೋಪನೆ ಅಳವಡಿಸಿಕೊಂಡಾಗ ಹೆಚ್ಚಿನ ಆದಾಯ ಪಡೆಯಬಹುದು. ಈ ನಿಟ್ಟಿನಲ್ಲಿ ಪ್ರಸಕ್ತ ತರಬೇತಿ ಕಾರ್ಯಕ್ರಮ ರೈತರಿಗೆ ಅತ್ಯಂತ ಅನುಕೂಲಕರವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಶುಸಂಗೋಪನಾ ಅಧಿಕಾರಿ ಡಾ. ಎಸ್. ಬಾಲರಾಜ್, ತಮ್ಮ ಕೇಂದ್ರದ ವತಿಯಿಂದ ಪಶು ಸಂಗೋಪನೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಹುಲಕೋಟಿ ಎಸ್.ಬಿ.ಐ.-ಎ.ಎಸ್.ಎಫ್-ಆರ್.ಸೆ.ಟಿಯ ನಿರ್ದೇಶಕ ಶಿವಕುಮಾರ ಎಸ್ ಮಾತನಾಡಿ, ಪಶು ಸಂಗೋಪನೆ ಉದ್ಯಮವನ್ನು ಪ್ರಾರಂಭಿಸಲು ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಹಾಗೂ ಸಾಲ ಸೌಲಭ್ಯಗಳಿದ್ದು, ರೈತರು ಹಣಕಾಸಿನ ನೆರವು ಪಡೆದು ಹಂತ-ಹಂತವಾಗಿ ಪಶು ಸಂಗೋಪನೆ ಉದ್ಯಮವನ್ನು ಮುನ್ನಡೆಸಬೇಕು ಎಂದು ತಿಳಿಸಿದರು.
ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ವ್ಹಿ.ಮಂಕಣಿ ಮಾತನಾಡಿ, ಹೈನುಗಾರಿಕೆ ಹಾಗೂ ಪಶು ಸಂಗೋಪನೆ ಉಪಕಸಬುಗಳು ಹೆಚ್ಚು ಲಾಭದಾಯಕ ಉದ್ಯಮಗಳಾಗಿದ್ದು, ಶಿಬಿರಾರ್ಥಿಗಳು ಈ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೈನು ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಹೆಚ್ಚಿನ ಮಾಹಿತಿ ಪಡೆಯಬೇಕು ಎಂದರು.
ಡಾ. ಪ್ರವೀಣ ಎಸ್. ಕರಿಕಟ್ಟಿ ಸ್ವಾಗತಿಸಿದರು. ಡಾ. ವಿನಾಯಕ ನಿರಂಜನ ನಿರೂಪಿಸಿ ವಂದಿಸಿದರು.