ಮಂಡ್ಯ: ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ರೈತರ ಜಮೀನನ್ನು ವಕ್ಫ್ ಖಾತೆಗೆ ಸೇರಿಸಲು ತೋರಿದ ಕೈಚಳಕ ಬಯಲಾಗಿತ್ತು. ಇದರಿಂದ ಆಕ್ರೋಶಗೊಂಡ ರೈತರು ಹೋರಾಟಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಪಹಣಿಗಳಲ್ಲಿದ್ದ ವಕ್ಫ್ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇದರ ಬೆನ್ನಲ್ಲೇ ಸರ್ಕಾರಿ ಶಾಲೆ ಜಾಗ ಮೇಲೂ ವಕ್ಫ್ ಬೋರ್ಡ್ ಕಣ್ಣಿಟ್ಟಂತೆ ಕಾಣುತ್ತಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದ ಸರ್ಕಾರಿ ಶಾಲೆ ಜಾಗದ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಸರ್ವೆ ನಂ.215ರ 30 ಗುಂಟೆ ಜಾಗದಲ್ಲಿ ಸರ್ಕಾರಿ ಶಾಲೆ ಇದೆ. ಈ ಶಾಲೆಯ ಜಾಗದ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ನಮೂದಾಗಿದೆ. ಸರ್ಕಾರಿ ಶಾಲೆ ಜಾಗ ಕಬಳಿಕೆಗೆ ಮುಂದಾದ ವಕ್ಫ್ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಸರ್ಕಾರದ ವಿರುದ್ಧ ಕಿಡಿ ಕಾರಿ ರಾಜ್ಯದ ವಕ್ಫ್ ಮಂಡಳಿ ವಜಾಗೊಳಿಸಲು ಆಗ್ರಹಿಸಿದ್ದಾರೆ.