ಉತ್ತರಕಾಶಿ: ಉತ್ತರಾಖಂಡದ ಹಿಮಾಲಯ ಪರ್ವತಶ್ರೇಣಿಯಲ್ಲಿ ನೆಲೆಗೊಂಡಿರುವ ಶತಮಾನಗಳಷ್ಟು ಹಳೆಯದಾದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಶೀಘ್ರದಲ್ಲೇ ಹಿಂದೂಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ. ಹಿಂದೂಗಳನ್ನು ಹೊರತುಪಡಿಸಿ ಇತರೆ ಧರ್ಮದವರಿಗೆ ದೇವಾಲಯ ಪ್ರವೇಶವನ್ನು ನಿಷೇಧಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಚಾರ್ ಧಾಮ್ ತೀರ್ಥಯಾತ್ರೆಯ ಪ್ರಮುಖ ಕೇಂದ್ರಗಳಾದ ಈ ಎರಡು ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ದೇವಾಲಯಗಳನ್ನು ನಿರ್ವಹಿಸುವ ಸಂಸ್ಥೆ ಪ್ರಕಟಿಸಿದೆ.
ಬದರಿನಾಥ–ಕೇದಾರನಾಥ ಧಾಮ ಸೇರಿದಂತೆ ಬದರಿನಾಥ–ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ನಿಯಂತ್ರಣದಲ್ಲಿರುವ ಎಲ್ಲಾ ದೇವಾಲಯಗಳಿಗೂ ಈ ನಿರ್ಬಂಧ ಅನ್ವಯವಾಗಲಿದೆ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧದ ಪ್ರಸ್ತಾವನೆಯನ್ನು ಮುಂಬರುವ ದೇವಾಲಯ ಸಮಿತಿ ಮಂಡಳಿ ಸಭೆಯಲ್ಲಿ ಅಂಗೀಕರಿಸುವ ನಿರೀಕ್ಷೆಯಿದೆ.
ಇದೇ ವೇಳೆ, ಈ ನಿರ್ಬಂಧವು ಗಂಗೋತ್ರಿ ಧಾಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಮಾ ಗಂಗೆಯ ಚಳಿಗಾಲದ ವಾಸಸ್ಥಾನವೆಂದು ಕರೆಯಲ್ಪಡುವ ಮುಖ್ಬಾ ಪ್ರದೇಶಕ್ಕೂ ಇದು ಅನ್ವಯವಾಗಲಿದೆ. ಶ್ರೀ ಗಂಗೋತ್ರಿ ದೇವಾಲಯ ಸಮಿತಿಯ ಅಧ್ಯಕ್ಷ ಸುರೇಶ್ ಸೆಮ್ವಾಲ್ ಅವರು, ಹಿಂದೂಯೇತರರು ಧಾಮ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ. ಚಳಿಗಾಲದ ತಿಂಗಳುಗಳಲ್ಲಿ ಮುಖ್ಬಾದಲ್ಲಿಯೂ ಇದೇ ನಿಯಮ ಜಾರಿಯಲ್ಲಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.



