ಟೀಮ್ ಇಂಡಿಯಾ ತಂಡಕ್ಕೆ ಯುವ ಆಟಗಾರರ ಆಗಮನದಿಂದ ಹಿರಿಯ ಆಟಗಾರರಿಗೆ ಕೊಂಚ ಆತಂಕ ಉಂಟಾಗಿದೆ. ಅಂತಹ ಆಟಗಾರರಲ್ಲಿ ಸಂಜು ಸ್ಯಾಮ್ಸನ್ ಕೂಡ ಒಬ್ಬರು.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಎರಡೆರಡು ಶತಕ ಸಿಡಿಸಿ ಸಂಚಲನ ಮೂಡಿಸಿದ್ದ ಸಂಜು ಸ್ಯಾಮ್ಸನ್ಗೆ, ಇನ್ನು ಮುಂದೆ ಭಾರತ ಟಿ20 ತಂಡದಲ್ಲಿ ಆರಂಭಿಕ ಸ್ಥಾನ ಖಚಿತ ಎಂದು ಹೇಳಲಾಗುತ್ತಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಬರುವ ಹೊತ್ತಿಗೆ ಇಡೀ ಪರಿಸ್ಥಿತಿಯೇ ಬದಲಾಗಿದೆ. ಇಂಗ್ಲೆಂಡ್ ವಿರುದ್ಧ ಆಡಿರುವ ನಾಲ್ಕು ಪಂದ್ಯಗಳಲ್ಲೂ ಸಂಜು ವಿಫಲರಾಗಿದ್ದಾರೆ. ಅದರಲ್ಲೂ ಆಡಿದ ನಾಲ್ಕು ಪಂದ್ಯಗಳಲ್ಲೂ ಸಂಜು ಒಂದೇ ರೀತಿಯಾಗಿ ವಿಕೆಟ್ ಒಪ್ಪಿಸಿರುವುದು ಅವರ ವೃತ್ತಿಜೀವನಕ್ಕೆ ಅಪಾಯದ ಮುನ್ಸೂಚನೆಯಾಗಿದೆ.
ಟಿ20 ಸರಣಿಯ ನಾಲ್ಕೂ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಒಂದೇ ತಪ್ಪಿಗೆ ವಿಕೆಟ್ ಕೈಚೆಲ್ಲಿದ್ದಾರೆ. ಅಂದರೆ ಸಂಜು ಸ್ಯಾಮ್ಸನ್ ಟಿ20 ಸರಣಿಯ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಶಾರ್ಟ್ ಬಾಲ್ ಎದುರಿಸುವಲ್ಲಿ ವಿಫಲರಾಗಿ ವಿಕೆಟ್ ಕಳೆದುಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪ್ರತಿ ಪಂದ್ಯದಲ್ಲೂ ಸಂಜು ಶಾರ್ಟ್ ಬಾಲ್ಗಳಿಗೆ ಔಟಾಗಿದ್ದಾರೆ. ಮೊದಲ ಮೂರು ಟಿ20 ಪಂದ್ಯಗಳಲ್ಲಿ ಜೋಫ್ರಾ ಆರ್ಚರ್ ಎಸೆದ ಶಾರ್ಟ್ ಪಿಚ್ ಬಾಲ್‌ಗೆ ವಿಕೆಟ್ ಒಪ್ಪಿಸಿದ್ದ ಸಂಜು, ನಾಲ್ಕನೇ ಟಿ20 ಪಂದ್ಯದಲ್ಲಿ ಸಾಕಿಬ್ ಮಹಮೂದ್ ಎಸೆದ ಮೊದಲ ಶಾರ್ಟ್ ಬಾಲ್ನಲ್ಲೇ ವಿಕೆಟ್ ಒಪ್ಪಿಸಿದರು.
ಸಂಜು ಸ್ಯಾಮ್ಸನ್ ಪದೇಪದೇ ಶಾರ್ಟ್ ಬಾಲ್‌ಗಳನ್ನು ಆಡುವ ಯತ್ನದಲ್ಲಿ ವಿಕೆಟ್ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದರೆ, ಸಂಜು ಶಾರ್ಟ್ ಬಾಲ್‌ಗಳನ್ನು ಎದುರಿಸುವುದರಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಮೂರು ಶತಕಗಳನ್ನು ಸಿಡಿಸಿದ್ದಾರೆಯಾದರೂ ಅವರ ಬ್ಯಾಟಿಂಗ್ ಸರಾಸರಿ ಕೇವಲ 25.61 ಆಗಿದೆ. ಇದರರ್ಥ ಸಂಜು ಸ್ಯಾಮ್ಸನ್ ಟಿ20 ನಲ್ಲಿ ರನ್ ಗಳಿಸುವುದಕ್ಕಿಂತ ಹೆಚ್ಚು ವಿಫಲರಾಗಿದ್ದಾರೆ. ಇದು ಅವರ ಟಿ20 ವೃತ್ತಿಜೀವನ ಅಪಾಯದಲ್ಲಿದೆ ಎಂಬುದರ ಸೂಚಕವಾಗಿದೆ.