ಪರಿಸರ ಸಮೃದ್ಧಿಗಾಗಿ ಕೊಡುಗೆ ನೀಡಿ : ಪ್ರೊ.ಡಾ.ಸುರೇಶ ವಿ. ನಾಡಗೌಡರ

0
Environment Day Celebration at Panchayat Raj University
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪರಿಸರ ಸಮತೋಲನ ಕಾಪಾಡಲು ಹೆಚ್ಚು ಸಸಿಗಳನ್ನು ನೆಡಬೇಕು.

Advertisement

ಅವುಗಳನ್ನು ಪಾಲನೆ, ಪೋಷಣೆ ಮಾಡಿ ಗಿಡಗಳಾದ ಮೇಲೆ ಸಂರಕ್ಷಣೆ ಮಾಡಬೇಕು. ಈ ಸಂರಕ್ಷಣೆಯ ಕಾಳಜಿಯಿಂದ ಜೀವಿಗಳ ಪೋಷಣೆಯೂ ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿಗಳು (ಪ್ರಭಾರ) ಹಾಗೂ ಕುಲಸಚಿವರಾದ ಪ್ರೊ. ಡಾ. ಸುರೇಶ ವಿ. ನಾಡಗೌಡರ ಅಭಿಪ್ರಾಯಪಟ್ಟರು.

ಬುಧವಾರ ವಿಶ್ವವಿದ್ಯಾಲಯ, ಎನ್‌ಎಸ್‌ಎಸ್ ಕೋಶ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಇವರುಗಳ ಸಹಯೋಗದೊಂದಿಗೆ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರದ ದಿನದ ಕಾರ್ಯಕ್ರಮದಲ್ಲಿ ಸಬರಮತಿ ಆಶ್ರಮದ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಯುವಜನತೆ ಪರಿಸರದ ಸಮೃದ್ಧಿಗಾಗಿ ಕೊಡುಗೆ ನೀಡಬೇಕು. ಪರಿಸರ ಸಮೃದ್ಧಿಯಿಂದ ಇದ್ದರೆ ಮಾತ್ರ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಯುವ ವಿದ್ಯಾರ್ಥಿಗಳಲ್ಲಿ ಪರಿಸರ ಕುರಿತಾದ ಕಾಳಜಿಯು ನಿರಂತರ ಮತ್ತು ಶಾಶ್ವತವಾಗಿರಲೆಂದು ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗಿದೆ. ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ಸಾವಿರ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಒಟ್ಟು 50 ಸಾವಿರ ಗಿಡಗಳನ್ನು ನೆಟ್ಟು ವಿಶ್ವವಿದ್ಯಾಲಯವನ್ನು ಹಸಿರು ವಿಶ್ವವಿದ್ಯಾಲಯವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮದ ನಂತರ ವಿಶ್ವವಿದ್ಯಾಲಯದ ಆವರಣದಲ್ಲಿ ವಿವಿಧ ಜಾತಿಯ ಸಾವಿರಕ್ಕೂ ಹೆಚ್ಚು ಗಿಡಗಳನ್ನು ವಿದ್ಯಾರ್ಥಿಗಳು ಮತ್ತು ಬೋಧಕ-ಬೋಧಕೇತರ ವೃಂದದವರು ಸೇರಿ ನೆಟ್ಟು, ಪರಿಸರ ಪ್ರೇಮ ಮೆರೆದರು.

ಕಾರ್ಯಕ್ರಮದಲ್ಲಿ ಉಮೇಶ ಬಾರಕೇರ, ಡಾ. ಅಬ್ದುಲ್ ಅಜೀಜ್ ಮುಲ್ಲಾ, ಡಾ. ಗಿರೀಶ ದೀಕ್ಷಿತ್, ಶಶಿಭಷಣ್ ದೇವೂರ, ಮೃತ್ಯುಂಜಯ ಹಿರೇಮಠ, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರಶಾಂತ ಮೇರವಾಡೆ, ಡಾ. ಉಡಚಪ್ಪ ಪೂಜಾರ ಸೇರಿದಂತೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಪ್ರಕಾಶ ಮಾಚೇನಹಳ್ಳಿ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗದಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಲೋಕರಾಜ ಮೀನಾ ಅವರು ಮಾತನಾಡಿ, ಪ್ರಕೃತಿ ತನ್ನತನವನ್ನು, ಸಮತೋಲನವನ್ನು ಕಳೆದುಕೊಳ್ಳುತ್ತಿದೆ. ತನ್ನ ಜೀವವೈವಿಧ್ಯತೆಯನ್ನು, ತನ್ನ ನೈಸರ್ಗಿಕ ಸೌಂದರ್ಯ, ತನ್ಮಯತೆಯನ್ನು ಉಳಿಸಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಹೊಣೆಯನ್ನು ಹೊಂದಬೇಕು ಎಂದರು.


Spread the love

LEAVE A REPLY

Please enter your comment!
Please enter your name here