ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಅಭಿವೃದ್ಧಿ ಯುಗ ಎಂದು ಗಿಡ-ಮರ ಕಡಿಯುತ್ತಿರುವುದರಿಂದ ತಾಪಮಾನ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರಕೃತಿ ಇಂದು ನಮ್ಮ ಮೇಲೆ ಮುನಿಸಿಕೊಳ್ಳುತ್ತಿದೆ. ಇದನ್ನು ತಪ್ಪಿಸಬೇಕೆಂದರೆ ಸಾಲುಮರದ ತಿಮ್ಮಕ್ಕನಂತೆ ಗಿಡ ನೆಡುವ ಕಾರ್ಯ ನಮ್ಮಿಂದಾಗಬೇಕು ಎಂದು ಧಾರವಾಡದ ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ ಅಭಿಪ್ರಾಯಪಟ್ಟರು.
ನಗರದ ವಿಜಯನಗರ ಪಿ.ಯು ಕಾಲೇಜಿನಲ್ಲಿ ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ, ಕೆ.ಎಸ್.ಎಸ್ ಪಿಯು ಕಾಲೇಜ ವಿದ್ಯಾನಗರ ಮತ್ತು ಶ್ರೇಯಾ ಸೇವಾ ಫೌಂಡೇಶನ್ ಹುಬ್ಬಳ್ಳಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ `ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಪರಿಸರ ಇರುವಲ್ಲಿ ಆರೋಗ್ಯ ಇರುತ್ತದೆ. ಪರಿಸರ ಸಂರಕ್ಷಣೆ ಮಾಡುವುದರ ಬಗ್ಗೆ ಅರಿವು ಮೂಡಿಸುವ ಕಾರ್ಯ ಶಾಲಾ-ಕಾಲೇಜು ಮತ್ತು ಎನ್‌ಜಿಓಗಳಿಂದ ಆಗಬೇಕಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕ ಸಂತೋಷ ಶೆಟ್ಟಿ, ಡಾ. ರಮೇಶ ಮಹಾದೇವಪ್ಪನವರ, ಸಂತೋಷ ವರ್ಣೆಕರ, ವಿ.ಜಿ. ಪಾಟೀಲ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಪರಿಸರ ದಿನಾಚರಣೆ ಪ್ರಯುಕ್ತವಾಗಿ ಪರಿಸರ ಗೀತಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಮಹಿಳಾ ಸಂಘಗಳಿಗೆ ಬಹುಮಾನ ಹಾಗೂ ಸಸಿಗಳನ್ನು ವಿತರಿಸಲಾಯಿತು.
ಸಂದೀಪ ಬೂದಿಹಾಳ, ಲತಾ ಕೆ.ಶಿಂಧೆ, ವಾಯ್.ಎನ್. ಮಾಳಗಿ, ಗದಗಯ್ಯ ಹಿರೇಮಠ, ಬಸವರಾಜ ಸುಳ್ಳದ, ಹುಬ್ಬಳ್ಳಿ ಧಾರವಾಡದ ವಿವಿಧ ಮಹಿಳಾ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಉಪಸ್ಥಿತರಿದ್ದರು.
ವಾಯ್.ಎನ್. ಮಾಳಗಿ ಪ್ರಾರ್ಥಿಸಿದರು. ಜಯಶ್ರೀ ಗೌಳಿಯವರ ಬಹುಮಾನ ವಿತರಣೆ ನಡೆಸಿಕೊಟ್ಟರು. ರಾಮು ಮೂಲಗಿ ಸ್ವಾಗತಗೀತೆ ಹಾಡಿದರು. ಆರ್.ಎಂ. ಗೋಗೇರಿ ಸ್ವಾಗತಿಸಿದರು. ಬೀರೇಶ ತಿರಕಪ್ಪನವರ ನಿರೂಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಸ್.ಎಸ್ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಮಾತನಾಡುತ್ತ, ಸಾಲುಮರದ ತಿಮ್ಮಕ್ಕನಂತೆ ಗಿಡ-ಮರಗಳನ್ನು ಬೆಳೆಸುವಲ್ಲಿ ಎಲ್ಲರೂ ಅವರೊಟ್ಟಿಗೆ ಕೈ ಜೋಡಿಸಿ ಹಸಿರನ್ನು ಉಸಿರೆಂದು ಪ್ರೀತಿಸಿ, ಗಿಡ-ಮರಗಳನ್ನು ಬೆಳಸಬೇಕು ಎಂದು ಹೇಳಿದರು.