ವಿಜಯಸಾಕ್ಷಿ ಸುದ್ದಿ, ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಆರಂಭಿಸಲು ಉದ್ದೇಶಿಸಿರುವ ಇಲೆಕ್ಟ್ರಿಕ್ ರ್ಯಾಪಿಡ್ ಟ್ರಾನ್ಸಿಟ್ (ಇ-ಆರ್‌ಟಿ) ಯೋಜನೆ ಕುರಿತು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಅವರು, ಬೆಳಗಾವಿಯ ಸುವರ್ಣ ಸೌಧದಲ್ಲಿ ಸಭೆ ನಡೆಸಿ, ಪ್ರಾತ್ಯಕ್ಷಿಕೆ ವೀಕ್ಷಿಸಿದರು.
ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಯೋಜನೆ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಶಾಸಕರಾದ ಎನ್.ಹೆಚ್. ಕೋನರಡ್ಡಿ, ಅರವಿಂದ್ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಎಂ.ಆರ್. ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆಲವು ದಿನಗಳ ಹಿಂದೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಭೆಯಲ್ಲಿ ಸಚಿವ ಲಾಡ್ ಭಾಗವಹಿಸಿ ಯೋಜನೆ ಕುರಿತು ವಿವರ ನೀಡಿದ್ದರು. ಈ ವೇಳೆ ವಿದ್ಯುತ್ ಕ್ಷಿಪ್ರ ಸಾರಿಗೆ (ಇ-ಆರ್‌ಟಿ) ಪರಿಚಯಿಸಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ ಓಇಎಸ್‌ಎಸ್ ಇಂಡಿಯಾ ಕಂಪನಿಯ ಪ್ರತಿನಿಧಿಗಳು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.



